ಸೇಡಂ: ಕೊರೊನಾ ಮಹಾಮಾರಿಯ ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಠಿಣ ನಿಲುವು ತಾಳುತ್ತಿರುವ ಪೊಲೀಸರು ಜನರನ್ನು ಮನೆಯಿಂದ ಹೊರಬಾರದಂತೆ ಎಚ್ಚರಿಸುತ್ತಿರುವುದರ ಜೊತೆಗೆ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳುತ್ತಿದ್ದಾರೆ. ಇಡೀ ತಾಲೂಕಿನಾದ್ಯಂತ ನಾಕಾಬಂದಿ ಹಾಕಲಾಗಿದೆ.
ಸೇಡಂ ಗಡಿಯಲ್ಲಿ ವಿಶೇಷ ತಂಡ ರಚಿಸಿ ಹೊರ ರಾಜ್ಯದ ವಾಹನಗಳ ಮೇಲೆ ನಿಗಾ ಇರಿಸಲಾಗಿದೆ. ಜೊತೆಗೆ ಗ್ರಾಮೀಣ ಭಾಗದಲ್ಲಿ ಹೊರ ರಾಜ್ಯ, ಹೊರ ದೇಶಗಳಿಂದ ಬರುವವರ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಲ್ಲದೇ 144 ಸೆಕ್ಷನ್ ಜಾರಿ ಇರುವುದರಿಂದ ಸುಖಾಸುಮ್ಮನೆ ಓಡಾಡುವವರಿಗೆ ಲಾಠಿ ರುಚಿಯನ್ನೂ ಪೊಲೀಸರು ತೋರಿಸಿದ್ದಾರೆ.
ಇನ್ನೊಂದೆಡೆ ಜನರಲ್ಲಿ ಜಾಗೃತಿ ಮೂಡಿಸಲು ಅನೇಕ ರೀತಿ ಪ್ರಯತ್ನಗಳನ್ನೂ ಪೊಲೀಸ್ ಇಲಾಖೆ ಮಾಡುತ್ತಿದೆ. ಡಂಗೂರ ಸಾರುವ ಕಾರ್ಯಕ್ಕೆ ಪಿಎಸ್ಐ ಸುಶೀಲ್‌ಕುಮಾರ್ ಚಾಲನೆ ನೀಡಿದ್ದಾರೆ. ಬುಧವಾರದಿಂದ ತೀರಾ ಕಠಿಣ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಸಾರ್ವಜನಿಕರು ಸಹಕರಿಸಿ ಮನೆಯಲ್ಲೇ ಇರಬೇಕು. ಇಲ್ಲವಾದಲ್ಲಿ ಕಾನೂನಿನ ಕ್ರಮ ಎದುರಿಸಬೇಕಾಗುತ್ತದೆ. ಜೈಲು ವಾಸವನ್ನೂ ಅನುಭವಿಸಬೇಕಾಗುತ್ತದೆ ಎಂದು ಪಿಎಸ್ಐ ಎಚ್ಚರಿಸಿದ್ದಾರೆ.