ಕಲಬುರಗಿ: ಹಳೆ ವೈಷಮ್ಯದ ಹಿನ್ನೆಲೆ ವ್ಯಕ್ತಿಯೊಬ್ಬನನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ ಘಟನೆ ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿ ತಡರಾತ್ರಿ ನಡೆದಿದೆ. ಗುರುರಾಜ್ ಕುಲಕರ್ಣಿ (35) ಎಂಬಾತ ಕೊಲೆಯಾದ ವ್ಯಕ್ತಿ. ಗುರುರಾಜ್ ಹಾಗೂ ಪಕ್ಕದ ಮನೆ ಪವನ್ ಜಾಗಿರದಾರ್ ನಡುವೆ ಗಲಾಟೆ ನಡೆದಿತ್ತು.
ಮೇಲ್ನೋಟಕ್ಕೆ ಇದೊಂದು ನಾಯಿ ವಿಚಾರವಾಗಿ ನಡೆದ ಜಗಳ ಎನ್ನಲಾಗುತ್ತಿದೆ. ಗುರುರಾಜ್ ಮನೆಯಲ್ಲಿನ ನಾಯಿಗೆ ಪಕ್ಕದ ಮನೆಯ ಪವನ್ ಕಲ್ಲು ಹೊಡೆಯುತ್ತಿದ್ದ. ಇದೇ ವಿಚಾರಕ್ಕೆ ಎರಡು ತಿಂಗಳ ಹಿಂದೆ ಗಲಾಟೆ ಕೂಡ ನಡೆದಿತ್ತು ಎಂದು ಹೇಳಲಾಗುತ್ತಿದೆಯಾದರೂ ಕೊಲೆಗೆ ಬೇರೆ ಕಾರಣ ಇದೆ ಎಂಬ ಅನುಮಾನವೂ ವ್ಯಕ್ತವಾಗಿದೆ.
ನಿನ್ನೆರಾತ್ರಿ ಪವನ್ ಹಾಗೂ ಆತನ ಸ್ನೇಹಿತರು ಗುರುರಾಜ್‌ನನ್ನು ಸಂಧಾನಕ್ಕಾಗಿ ಕರೆಯಿಸಿಕೊಂಡಿದ್ದರು. ಈ ವೇಳೆ, ಮಾತಿಗೆ ಮಾತು ಬೆಳೆದು ಗುರುರಾಜ್‌ನನ್ನು ಪವನ್ ಹಾಗೂ ಆತನ ಸ್ನೇಹಿತರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮತ್ತೊಬ್ಬನ ಜೊತೆ ಸಂಬಂಧ: ಪ್ರಿಯಕರನ ಕೊಲೆಗೆ ಸುಪಾರಿ ಕೊಟ್ಟ ಪ್ರಿಯತಮೆ