ಕಲಬುರಗಿ: ಎರಡು ತಲೆ ಹಾವಿನ ವಿಚಾರದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ತಂದೆ ಮಗನನ್ನು ಕಮಲಾಪುರ ಪೊಲೀಸರು ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮಚಂದ್ರ ಚಿಲಾನೋರ ಮತ್ತು ಭರತ್ ಚಿಲಾನೋರ ಬಂಧಿತ ಆರೋಪಿಗಳು. ಮಾರಕಾಸ್ತ್ರಗಳಿಂದ ಬರ್ಬರವಾಗಿ ತಿವಿದು ಹತ್ಯೆಗೈದ ಸ್ಥಿತಿಯಲ್ಲಿ ಅಪರಿಚಿತ ಶವವೊಂದು ಕಮಲಾಪೂರ ಬಳಿಯ ಪಟವಾದ ಮುಲ್ಲಾಮಾರಿ ಹಳ್ಳದಲ್ಲಿ ಪತ್ತೆಯಾಗಿತ್ತು. ಪ್ರಕರಣವನ್ನು ಬೆನ್ನಟ್ಟಿದ ಕಮಲಾಪುರ ಪೊಲೀಸರು ಕೊಲೆಯಾದ ವ್ಯಕ್ತಿ ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಕೊಡಂಬಲ ಗ್ರಾಮದ ನಿವಾಸಿ ಸಿದ್ರಾಮಪ್ಪ ಸಾಸರವಗ್ಗೆ ಎಂದು ತಿಳಿದುಬಂದಿತ್ತು. ಬಳಿಕ ಅನುಮಾನದ ಮೇಲೆ ಕೊಲೆಯಾದ ಸಿದ್ರಾಮಪ್ಪನ ಸ್ನೇಹಿತ ರಾಮಚಂದ್ರನನ್ನು ವಿಚಾರಣೆ ನಡೆಸಿದಾಗ ತನ್ನ ಮಗ ಭರತ ಜೊತೆ ಸೇರಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಗಳು ಬಳಸಿದ ಮಾರಕಾಸ್ತ್ರ ಹಾಗೂ ಎರಡು ತಲೆಯ ಹಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ವಿವರ:
ಕೊಲೆಯಾದ ಸಿದ್ರಾಮಪ್ಪ ಹಾಗೂ ಕೊಲೆ ಮಾಡಿರುವ ರಾಮಚಂದ್ರ ಸ್ನೇಹಿತರಾಗಿದ್ದು, ಇಬ್ಬರು ಸೇರಿ ಎರಡು ತಲೆ ಹಾವು ತಂದಿದ್ದರು. ಹಾವನ್ನು ರಾಮಚಂದ್ರ ಮನೆಯಲ್ಲಿ ಇಟ್ಟಿದ್ದರು. ಸಿದ್ರಾಮಪ್ಪನಿಗೆ ತಿಳಿಯದ ಹಾಗೆ ಹಾವನ್ನು ಶ್ರೀಮಂತ ಎಂಬಾತನಿಗೆ ರಾಮಚಂದ್ರ ಮಾರಾಟ ಮಾಡಿದ್ದ. ಈ ವಿಚಾರ ತಿಳಿದ ಸಿದ್ರಾಮಪ್ಪ ನವೆಂಬರ್ 4ರಂದು ರಾಮಚಂದ್ರ ಮನೆಗೆ ತೆರಳಿ ಹಾವು ಕೊಡುವಂತೆ ಗಲಾಟೆ ಮಾಡಿದ್ದ. ಇದರಿಂದ ರೊಚ್ಚಿಗೆದ್ದ ರಾಮಚಂದ್ರನ ಮಗ ಭರತ ಚಾಕುವಿನಿಂದ ಸಿದ್ದರಾಮಪ್ಪನ ಕುತ್ತಿಗೆಗೆ ಇರಿದಿದ್ದಾನೆ. ರಾಮಚಂದ್ರ ಸಹ ಮಚ್ಚಿನಿಂದ ಇರಿದು ಸಿದ್ರಾಮಪ್ಪನ ಕೊಲೆಗೈದಿದ್ದಾರೆ. ಶವವನ್ನ ತಂದೆ ಮಗ ಸೇರಿ ಕೌದಿಯಲ್ಲಿ ಕಟ್ಟಿ ತಮ್ಮದೇ ಟಿವಿಎಸ್ ಬೈಕ್ ಮೇಲೆ ತೆಗೆದುಕೊಂಡು ಹೋಗಿ ಪಟವಾದ ಗ್ರಾಮದ ಮುಲ್ಲಾಮಾರಿ ಹಳ್ಳದಲ್ಲಿ ಬಿಸಾಡಿದ್ದರು.