ಕಲಬುರಗಿ: ಜಿಲ್ಲೆಯ ಚಿತ್ತಾಪುರ ರೈಲು ನಿಲ್ದಾಣದ ಪಕ್ಕದಲ್ಲಿರುವ ಸ್ಟೇಷನ್ ತಾಂಡಾದಲ್ಲಿ ಸುಮಾರು 3 ಸಾವಿರ ಮನೆಗಳಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಜನರು ವಾಸವಾಗಿದ್ದಾರೆ. ಇವರು ಚಿತ್ತಾಪುರ ಪಟ್ಟಣಕ್ಕೆ ಹೋಗಬೇಕಂದರೆ ರೈಲ್ವೆ ಹಳಿಗಳನ್ನು ದಾಟಿಕೊಂಡೇ ಹೋಗಬೇಕಾದಂತಹ ದುಸ್ಥಿತಿ ಇದೆ.
ಶಾಲಾ-ಕಾಲೇಜುಗಳಿಗೆ, ತರಕಾರಿ ಮಾರುಕಟ್ಟೆಗೆ ಹೋಗಬೇಕಾದರೂ ಪ್ರಾಣ ಪಣಕ್ಕಿಟ್ಟು ರೈಲ್ವೆ ಹಳಿಗಳನ್ನು ದಾಟಿಕೊಂಡೇ ಹೋಗಬೇಕು. ಈ ಹಿಂದೆ ಇಂತಹ ಹಲವು ಘಟನೆಗಳು ನಡೆದು ಹಲವರು ಪ್ರಾಣ ಕಳೆದಕೊಂಡಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ನಿನ್ನೆ ನಡೆದ ಘಟನೆ. ಚಿತ್ತಾಪುರ ಪಟ್ಟಣಕ್ಕೆ ಹೋಗಿ ಮರಳಿ ಬರುತ್ತಿದ್ದ ತಾಂಡಾ ನಿವಾಸಿ ಮಾನಿಬಾಯಿ ಎಂಬ ಅಜ್ಜಿ, ಹಳಿ ದಾಟಿಕೊಂಡು ಬರುವಾಗ ದಿಢೀರ್ ಅಂತ ಬಂದ ರೈಲಿನಡಿಯಲ್ಲಿ ಸಿಲುಕಿದ್ದಾಳೆ. ಅದೃಷ್ಟವಶಾತ್ ಹಳಿಗಳ ಮಧ್ಯದಲ್ಲಿ ಮಲಗಿ ಪ್ರಾಣ ರಕ್ಷಿಸಿಕೊಂಡಿದ್ದಾಳೆ. ಈ ಭಯಾನಕ ದೃಶ್ಯ ನೋಡುಗರ ಎದೆ ಝಲ್ ಎನಿಸುವಂತಿದೆ. ಇಂತಹ ನರಕ ಸದೃಶ್ಯವನ್ನು ತಾಂಡಾ ನಿವಾಸಿಗಳು ದಿನಾ ಅನುಭವಿಸುತ್ತಿದ್ದಾರೆ.
ರೈಲು ನಿಲ್ದಾಣದಲ್ಲಿ ಮೇಲ್ಸೆತುವೆ ಇದೆ. ಆದ್ರೆ ನಿಲ್ದಾಣ ಪಕ್ಕದಲ್ಲಿರುವ ಮೂರು ಹಳಿ ದಾಟಲು ಮಾತ್ರ ಮೇಲ್ಸೇತುವೆ ಇಲ್ಲದಿರುವುದೇ ಇಷ್ಟೆಲ್ಲಾ ಅವಘಡಕ್ಕೆ ಕಾರಣವಾಗುತ್ತಿದೆ. ಓವರ್ ಬ್ರಿಡ್ಜ್ ನಿರ್ಮಾಣ ಮಾಡಿ ಕೊಡಿ ಅಂತ ತಾಂಡಾ ನಿವಾಸಿಗಳು ಪರಿಪರಿಯಾಗಿ ಬೇಡಿಕೊಂಡರೂ ಇಲ್ಲಿವರೆಗೆ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಸ್ಪಂದಿಸಿಲ್ಲ ಎಂದು ಆಕ್ರೋಶ ಹೊರಹಾಕ್ತಿದ್ದಾರೆ ಇಲ್ಲಿನ ನಿವಾಸಿಗಳು.
ಇಲ್ಲಿನ ಸಮಸ್ಯೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಗಮನಕ್ಕೆ ತರಲಾಗಿದೆ. ಪತ್ರಕ್ಕೆ ರಿಪ್ಲೈ ಕೂಡಾ ಬಂದಿದೆ. ಆದರೆ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಸರ್ಕಾರ ಕೂಡ ಕೈ ಜೋಡಿಸಬೇಕಾಗುತ್ತೆ ಎಂದು ಅಧಿಕಾರಿಗಳು ಸಬೂಬು ಹೇಳ್ತಿದ್ದಾರಂತೆ. ಈಗಲಾದ್ರೂ ಸಂಸದ ಉಮೇಶ ಜಾಧವ ಇದನ್ನು ಗಂಭೀರವಾಗಿ ಪರಿಗಣಿಸಿ ಓವರ್ ಬ್ರಿಡ್ಜ್ ನಿರ್ಮಿಸಿಕೊಟ್ಟರೆ ತಾಂಡಾ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಾರು.