ಕಲಬುರಗಿ: ರೈತ ಅನುವುಗಾರರ ಸೇವೆ ಮುಂದುವರೆಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ್ ಹಿರೇಮಠ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಅನುವುಗಾರರು ಪ್ರತಿಭಟನೆ ನಡೆಸಿ, ಕೃಷಿ ಸಚಿವ ಬಿ.ಸಿ.ಪಾಟೀಲ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಅನುವುಗಾರರು ಸರ್ಕಾರದ ವಿವಿಧ ಯೋಜನೆಗಳನ್ನು ಜನತೆಗೆ ಮುಟ್ಟಿಸುತ್ತಾರೆ. ಆದರೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ರೈತ ಅನುವುಗಾರರ ಹುದ್ದೆಗಳನ್ನೇ ತೆಗೆದು ಹಾಕಲಾಗಿದೆ. ಇದರಿಂದಾಗಿ ಸರ್ಕಾರದ ಯೋಜನೆಗಳನ್ನು ರೈತರಿಗೆ ಮುಟ್ಟಿಸುವುದು ಕಷ್ಟವಾಗಿದ್ದು, ಕೂಡಲೇ ರೈತ ವಿರೋಧಿ ನೀತಿ ಕೈಬಿಡಬೇಕು ಹಾಗೂ ರೈತ ಅನುವುಗಾರರ ಸೇವೆ ಮುಂದುವರೆಸಬೇಕು. ಜೊತೆಗೆ ಖಾಲಿ ಇರುವಲ್ಲಿ ರೈತ ಅನುವುಗಾರರ ನೇಮಕ ಮಾಡಿಕೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.