ಕಲಬುರಗಿ: ವಿಶ್ವದ ಮೂರನೇ ಶ್ರೇಷ್ಠ ನೇತ್ರತಜ್ಞ ಎಂಬ ಖ್ಯಾತಿ ಪಡೆದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಿಲ್ಲೆಯ ಚಿತ್ತಾಪುರದ ಡಾ.ಚಂದ್ರಪ್ಪ ರೇಷ್ಮಿ (90) ಅವರು ವಯೋಸಹಜ ಅನಾರೋಗ್ಯದಿಂದ ಕಲಬುರಗಿಯ ಜಯನಗರದಲ್ಲಿರುವ ಮನೆಯಲ್ಲಿ ಶನಿವಾರ ಇಹಲೋಕ ತ್ಯಜಿಸಿದ್ದರು. ಭಾನುವಾರ ಮಧ್ಯಾಹ್ನ ಅವರ ಹುಟ್ಟುರಾದ ಚಿತ್ತಾಪುರ ಪಟ್ಟಣದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಕಲಬುರಗಿಯ ತಮ್ಮ ನಿವಾಸದಲ್ಲಿ ಮೃತಪಟ್ಟ ಡಾ. ಚಂದ್ರಪ್ಪ ಅವರ ಪಾರ್ಥಿವ ಶರೀರವನ್ನು ಶನಿವಾರ ರಾತ್ರಿಯೇ ಅವರ ಹುಟ್ಟೂರು ಚಿತ್ತಾಪುರ ಪಟ್ಟಣಕ್ಕೆ ತಗೆದುಕೊಂಡು ಹೋಗಲಾಗಿತ್ತು. ಭಾನುವಾರ ಬೆಳಗ್ಗೆಯಿಂದ ಸಂಜೆ ಮೂರು ಗಂಟೆವರಗೆ ಡಾ. ಚಂದ್ರಪ್ಪ ಅವರು ಹುಟ್ಟಿ ಬೆಳೆದ ಮನೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ನಂತರ ತೆರೆದ ವಾಹನದಲ್ಲಿ ಮನೆಯಿಂದ ಚಿತ್ತಾಪುರ ಹೊರವಲಯದಲ್ಲಿರುವ ಅವರ ಜಮೀನಿಗೆ ಪಾರ್ಥಿವ ಶರೀರ ತಂದು ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣದಲ್ಲಿ 1934 ರ ಜನವರಿ 20 ರಂದು ಸಿದ್ರಾಮಪ್ಪ ಹಾಗೂ ವೀರಮ್ಮ ರೇಷ್ಮಿ ಅವರ ತೃತೀಯ ಸುಪುತ್ರನಾಗಿ ಜನಿಸಿದ್ದರು. ಚಂದ್ರಪ್ಪ ಅವರು ಅಮೆರಿಕ ಪ್ರಜೆಯಾಗಿರುವ ಕ್ಯಾಥರಿನ್ ಜಿನ್ನಿಸ್ ಅವರನ್ನು 1969ರಲ್ಲಿ ಮದುವೆ ಆಗಿದ್ದು, ಚಂದ್ರ ಜಿನ್ನಿಸ್ ರೇಷ್ಮಿ ಮತ್ತು ಮಗಳು ಶಾಲಿನಿ ರೇಷ್ಮಿ ಎಂಬ ಇಬ್ಬರು ಮಕ್ಕಳಿದ್ದಾರೆ.ಅಮೆರಿಕದಲ್ಲಿಯೇ ಸುಮಾರು 50 ವರ್ಷಗಳ ಕಾಲ ನೇತ್ರ ತಜ್ಞರಾಗಿ ತಮ್ಮ ಕುಟುಂಬ ಸಮೇತ ವಾಸವಾಗಿದ್ದರು.
ತವರು ನೆಲದ ಮೇಲೆ ಅವರಿಗಿದ್ದ ಸೆಳೆತದಿಂದ ಚಂದ್ರಪ್ಪ ಅವರು ತಮ್ಮ ಬದುಕಿನ ಕೊನೆಯ ದಿನಗಳನ್ನು ತಮ್ಮ ತವರು ಜಿಲ್ಲೆಯಲ್ಲಿ ಕಳೆಯಬೇಕೆಂದು ಆಶಯ ಹೊಂದಿದ್ದರು. ಹೀಗಾಗಿ ಕಳೆದ ಆರೇಳು ವರ್ಷಗಳ ಹಿಂದೆ ಶಾಶ್ವತವಾಗಿ ಅಮೆರಿಕ ತೊರೆದು ವಾಪಸ್ ಬಂದು ಕಲಬುರಗಿಯಲ್ಲಿ ವಾಸವಾಗಿದ್ದರು.
ವಿಶ್ವದಾದ್ಯಂತ ತಮ್ಮ ವೃತ್ತಿ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಅವರು, ಭಾರತದ ಮಾಜಿ ರಾಷ್ಟ್ರಪತಿ ಗ್ಯಾನಿ ಜೇಲ್ ಸಿಂಗ್, ಖ್ಯಾತ ಉದ್ಯಮಿ ಜೆ.ಆರ್.ಡಿ. ಟಾಟಾ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವಿಜಯಭಾಸ್ಕರ್ ರೆಡ್ಡಿ ಸೇರಿದಂತೆ ಗಣ್ಯಾತಿ ಗಣ್ಯರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿರುವ ಖ್ಯಾತಿ ಇವರದ್ದಾಗಿದೆ.
ಅಲ್ಲದೇ, ಅನೇಕ ಬಡವರಿಗೆ ಸ್ವಂತ ಹಣ ಖರ್ಚು ಮಾಡಿ ನೇತ್ರ ಚಿಕಿತ್ಸೆ ಮಾಡಿದವರು ಅನ್ನೋ ಹೆಗ್ಗಳಿಕೆ ಸಹ ಇವರಿಗೆ ಸಂದಿದೆ. ಕರ್ನಾಟಕ ರಾಜ್ಯೋತ್ಸವ ಮತ್ತು ಪಿ.ಎಸ್.ಶಂಕರ ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ಒಟ್ಟಿನಲ್ಲಿ ತಮ್ಮ ಜೀವನ ಪರ್ಯಂತ ಅದೆಷ್ಟೋ ಜನರ ಬಾಳಿಗೆ ಬೆಳಕು ನೀಡಿದ ವಿಶ್ವದ ಮೂರನೇ ಪ್ರಸಿದ್ಧ ನೇತ್ರತಜ್ಞ ಡಾ. ಚಂದ್ರಪ್ಪ ರೇಷ್ಮಿ ಅವರು ಇನ್ನೇನಿದ್ದರು ನೆನಪು ಮಾತ್ರ.
ಇದನ್ನೂ ಓದಿ: ಏಷ್ಯಾ ಬುಕ್ ಆಪ್ ರೆಕಾರ್ಡ್ನಲ್ಲಿ ಗ್ರಾಂಡ್ ಮಾಸ್ಟರ್ ಬಿರುದು ಪಡೆದ ಕಲಬುರಗಿಯ ಬಾಲಕ