ಕಲಬುರಗಿ: ಆಪರೇಷನ್ ಕಮಲ ಆಡಿಯೋ ಪ್ರಕರಣದ ತನಿಖೆಯ ತಡೆಯಾಜ್ಞೆ ತೆರವು ಅರ್ಜಿ ವಿಚಾರಣೆಯನ್ನು ಕಲಬುರಗಿ ಹೈಕೋರ್ಟ್ ಜನವರಿ ಮೊದಲ ವಾರಕ್ಕೆ ಮುಂದೂಡಿದೆ.
ಸರ್ಕಾರದ ವತಿಯಿಂದ ವಿಶೇಷ ಅಭಿಯೋಜಕರ ನೇಮಕದ ಹಿನ್ನೆಲೆ ಜನವರಿ ಮೊದಲ ವಾರಕ್ಕೆ ವಿಚಾರಣೆ ಮುಂದೂಡಲಾಗಿದೆ. ಇದರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಹಿನ್ನೆಲೆ:
ಯಾದಗಿರ ಜಿಲ್ಲೆ ಗುರುಮಿಠಕಲ್ ಶಾಸಕ ನಾಗನಗೌಡ ಕಂದಕೂರ ಜೆಡಿಎಸ್ ತೊರೆದು ಬಿಜೆಪಿಗೆ ಬಂದರೆ ಹತ್ತು ಕೋಟಿ ರೂಪಾಯಿ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಹಿರಂಗಗೊಳಿಸಿದ ಶಾಸಕ ನಾಗನಗೌಡ ಪುತ್ರ ಶರಣಗೌಡ ಕಂದಕೂರ, ಆಪರೇಷನ್ ಕಮಲ ನಡೆಸಲು ಹಣದ ಆಮಿಷವೊಡ್ಡಲಾಗಿದೆ ಎಂದು ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಈ ಪ್ರಕರಣದ ತನಿಖೆ ನಡೆಸದಂತೆ ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದ ಬಿಎಸ್ವೈ, ತನಿಖೆಗೆ ತಡೆಯಾಜ್ಞೆ ತಂದಿದ್ದರು. ಆ ಬಳಿಕ ತಡೆಯಾಜ್ಞೆ ತೆರವಿಗಾಗಿ ಶರಣಗೌಡ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ಕಲಬುರಗಿ ಪೀಠದಲ್ಲಿ ಇಂದು ನಡೆಯಿತು.