ಕಲಬುರಗಿ: ಇದೇ ನವೆಂಬರ್ 22 ರಂದು ಕಲಬುರಗಿ ವಿಮಾನ ನಿಲ್ದಾಣ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಶಾಸಕರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಂಸದ ಉಮೇಶ್ ಜಾಧವ್ ಈ ವಿಷಯ ತಿಳಿಸಿದರು. ಇನ್ನು ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಜಿಲ್ಲಾಡಳಿತ ಮತ್ತು ಏರ್‍ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಅಧಿಕಾರಿಗಳು ಸಾಂಘಿಕವಾಗಿ ಕಾರ್ಯನಿರ್ವಹಿಸುವಂತೆ ಕಲಬುರಗಿ ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ ಅಧಿಕಾರಿಗಳಿಗೆ ಸೂಚಿಸಿದರು.
ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆ ಹಿನ್ನೆಲೆಯಲ್ಲಿ ಏರ್‍ಪೋರ್ಟ್ ಆವರಣದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದರಿಂದ ಡಿಜಿಸಿಎ ನಿಯಮಾನುಸಾರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಉದ್ಘಾಟನಾ ಕಾರ್ಯಕ್ರಮದ ವೇದಿಕೆ ಸೇರಿದಂತೆ ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆ ಮಾಡಬೇಕು. ಈ ಭಾಗದಲ್ಲಿ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿರುವುದರಿಂದ ಎಲ್ಲಾ ವಿಶ್ವವಿದ್ಯಾಲಯಗಳು, ಖಾಸಗಿ ವಿಶ್ವವಿದ್ಯಾಲಯಗಳು, ಉದ್ಯಮಿಗಳು, ಸಿಮೆಂಟ್ ಕಂಪನಿ ಉದ್ಯಮಿಗಳು, ಶಿಕ್ಷಣ-ಸಂಸ್ಥೆಗಳು, ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನು ಆಹ್ವಾನಿಸಬೇಕು ಎಂದರು.
ವಿಮಾನ ನಿಲ್ದಾಣ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಸುಮಾರು 5000 ಜನ ಸಂಖ್ಯೆಗೆ ಆಸನ ವ್ಯವಸ್ಥೆ ಮಾಡಬೇಕು. ಭದ್ರತಾ ದೃಷ್ಠಿಯಿಂದ ಗಣ್ಯರಿಗೆ, ಮಾಧ್ಯಮದವರಿಗೆ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಪ್ರತ್ಯೇಕ ಪಾಸ್ ವಿತರಿಸಬೇಕು. ಎಲ್ಲೆಡೆ ಸ್ವಚ್ಛತೆ ಮತ್ತು ಸೌಂದರ್ಯೀಕರಣ ಕೈಗೊಳ್ಳಬೇಕು. ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯ ಕೈಗೊಳ್ಳಬೇಕು ಎಂದರು.
ಕಲಬುರಗಿ-ಬೆಂಗಳೂರು ಮಧ್ಯೆ ಈಗಾಗಲೆ ಸ್ಟಾರ್ ಏರ್ ಸಂಸ್ಥೆ ವಿಮಾನ ಸಂಚಾರಕ್ಕೆ ಅಣಿಗೊಂಡಿದ್ದು, ಏರ್ ಇಂಡಿಯಾದಿಂದಲೂ ಈ ಮಾರ್ಗದಲ್ಲಿ ವಿಮಾನಗಳು ಸಂಚರಿಸಲಿವೆ. ಇದಲ್ಲದೆ ಕಲಬುರಗಿ-ಹೈದ್ರಾಬಾದ್ ನಡುವೆ ವಿಮಾನ ಸಂಚಾರಕ್ಕೆ ಇಂಡಿಗೋ ಏರ್‍ಲೈನ್ಸ್‍ನೊಂದಿಗೆ ಸಹ ಚರ್ಚೆ ನಡೆದಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಸಿಎಂ ಸೇರಿದಂತೆ ಉಪ ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಹಾಗೂ ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಸೇರಿದಂತೆ ಕೇಂದ್ರ ವಿಮಾನಯಾನ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ಬಳಸದಂತೆ ಕಟ್ಟೆಚ್ಚರ..
ಕಾರ್ಯಕ್ರಮದಲ್ಲಿ ಎಲ್ಲಿಯೂ ಪ್ಲಾಸ್ಟಿಕ್ ಬಳಸದಂತೆ ಕಟ್ಟೆಚ್ಚರ ವಹಿಸಬೇಕು ಹಾಗೂ ಎಲ್ಲೆಡೆ ಸ್ವಚ್ಛತೆ ಕಾಪಾಡಬೇಕು. ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ
ಸೌಕರ್ಯ ಕೈಗೊಳ್ಳಬೇಕು ಎಂದು ಭಾರತೀಯ ವಿಮಾನಯಾನ ಪ್ರಾಧಿಕಾರದ ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ ರಾವ್ ಅವರಿಗೆ ಸೂಚಿಸಿದರು.