ಕಲಬುರಗಿ: ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದಲ್ಲಿ ಕಳೆದ ರಾತ್ರಿಯಿಂದ ಗ್ರಾಮಸ್ಥರ ಆರೋಗ್ಯದಲ್ಲಿ ಏಕಾಏಕಿ ಏರುಪೇರು ಕಂಡು ಬರುತ್ತಿದೆ. ವಾಂತಿ ಮತ್ತು ಭೇದಿಯಿಂದ ಜನರು ನಿತ್ರಾಣಗೊಳ್ಳುತ್ತಿದ್ದು, ಈಗಾಗಲೇ ಓರ್ವ ಮೃತಪಟ್ಟಿದ್ದು, 52 ಜನ ಅಸ್ವಸ್ಥರಾಗಿದ್ದಾರೆ.
ಮೃತರು ತಾಯಪ್ಪ (70) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ವಾಂತಿ ಮತ್ತು ಭೇದಿಯಿಂದ ಬಳಲಿದ ತಾಯಪ್ಪ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕಲುಷಿತ ನೀರು ಸೇವಿಸಿದ್ದ ಪರಿಣಾಮ ಗ್ರಾಮದಲ್ಲಿ ವಾಂತಿ ಮತ್ತು ಭೇದಿ ಉಲ್ಬಣಗೊಂಡಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಅಸ್ವಸ್ಥರನ್ನು ಜೇವರ್ಗಿ ಮತ್ತು ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸಮಸ್ಯೆ ಉಲ್ಭಣಗೊಂಡರೂ ಯಾರೊಬ್ಬರು ಸಹಾಯಕ್ಕೆ ಬರ್ತಿಲ್ಲ ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಾರದ ಹಿಂದಷ್ಟೇ ಜಿಲ್ಲೆಯ ಕಮಲಾಪುರ ತಾಲೂಕಿನ ಗೊಬ್ಬೂರವಾಡಿಯಲ್ಲಿ ಇಂತಹುದೇ ಘಟನೆ ನಡೆದಿತ್ತು. ಕಲುಷಿತ ನೀರು ಸೇವಿಸಿ ವಾಂತಿ -ಭೇದಿ ಉಲ್ಬಣಗೊಂಡಿತ್ತು. ಹೀಗಾಗಿ ಹಲವರು ಆಸ್ಪತ್ರೆಗೆ ದಾಖಲಾಗಿದ್ದರು. ಓರ್ವ ಮೃತಪಟ್ಟಿದ್ದು, ಹಲವರು ಚೇತರಿಸಿಕೊಂಡಿದ್ದರು. ಆರೋಗ್ಯ ಅಧಿಕಾರಿಗಳು ಗೋಬ್ಬೂರವಾಡಿ ಗ್ರಾಮದಲ್ಲಿಯೇ ಬೀಡಾರ ಹೂಡಿ ಚಿಕಿತ್ಸೆ ನೀಡಿದ್ದರು.
ಓದಿ: ವಿಷಕಾರಿ ಅನಿಲ ಸೋರಿಕೆ.. ಎಸ್ಡಿಎಂ, ಎಸ್ಡಿಆರ್ಎಫ್ ಸಿಬ್ಬಂದಿ ಸೇರಿ 32ಕ್ಕೂ ಹೆಚ್ಚು ಜನ ಅಸ್ವಸ್ಥ