ಯಡ್ರಾಮಿ (ಕಲಬುರಗಿ) : ಸಾಥಖೇಡ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಇಂದು ಬಹುತೇಕ ಪಾಲಕರು ಖಾಸಗಿ ಶಾಲೆಗಳತ್ತ ಆಕರ್ಷಿತರಾಗುತ್ತಾರೆ. ಈ ಮೂಲಕ ಸರ್ಕಾರಿ ಶಾಲೆಗಳಿಂದ ವಿಮುಖರಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸರ್ಕಾರಿ ಶಾಲೆಗಳಲ್ಲಿ ಕಟ್ಟಡಗಳು ಹಳೆಯದಾಗಿರುವುದು. ಹೀಗಾಗಿ, ಪುನಃ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ತಾವೇ ಮುಂದೆ ನಿಂತು ಕಟ್ಟಡಕ್ಕೆ ಬಣ್ಣದ ಮೆರುಗು ನೀಡಿದ್ದಾರೆ ಹಳೆ ವಿದ್ಯಾರ್ಥಿಗಳು.
ಸಾಥಖೇಡ ಗ್ರಾಮದಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಸುಮಾರು 28 ರಿಂದ 30 ವರ್ಷಗಳಿಂದ ಯಾವುದೇ ಸೌಂದರ್ಯೀಕರಣ ಕಂಡಿಲ್ಲ. ಗೋಡೆಗಳು ಬಿರುಕು ಬಿಟ್ಟಿದ್ದವು. ಕಬ್ಬಿಣದ ತಂತಿಗಳು ತುಕ್ಕು ಹಿಡಿದಿದ್ದವು. ಶಾಲಾ ಕಟ್ಟಡ ಸೌಂದರ್ಯಕ್ಕೆ ಹಣ ಬಿಡುಗಡೆ ಮಾಡುವಂತೆ ಗ್ರಾಮಸ್ಥರು ಮತ್ತು ಶಾಲೆಯ ಮುಖ್ಯ ಶಿಕ್ಷಕರು ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಶಾಸಕರಿಗೆ ಮನವಿ ಮಾಡಿದ್ದಾರೆ. ಆದರೆ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ, ಹಳೆ ವಿದ್ಯಾರ್ಥಿಗಳ ತಂಡ ಸ್ವಂತ ಖರ್ಚಿನಿಂದ ಕಟ್ಟಡಕ್ಕೆ ಬಣ್ಣ ಹಚ್ಚಿದ್ದಾರೆ.
"ಸರ್ಕಾರಿ ಶಾಲೆಗಳು ಉಳಿವು ಹಳೆ ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಸಾಧ್ಯ. ನಮ್ಮ ಶಾಲೆಯಲ್ಲಿ ಓದಿದ ಹಳೆ ವಿದ್ಯಾರ್ಥಿಗಳು ಶಾಲೆಯ ಸೌಂದರ್ಯಕ್ಕೆ ತಮ್ಮ ಸ್ವಂತ ಖರ್ಚಿನಿಂದ ಶಾಲೆಯ ಎಲ್ಲ ಕೋಣೆಗಳಿಗೆ ಸುಣ್ಣ- ಬಣ್ಣಗಳ ಲೇಪನ ಮಾಡಿದ್ದಾರೆ. ಇವರ ಈ ಕಾರ್ಯ ತಾಲೂಕು ಮತ್ತು ಜಿಲ್ಲೆ, ರಾಜ್ಯಕ್ಕೆ ಮಾದರಿಯಾಗಿದೆ" ಎಂದು ಮುಖ್ಯಶಿಕ್ಷಕಿ ಶ್ರೀಮತಿ ಗಂಗೂಬಾಯಿ ಕುಲಕರ್ಣಿ ಹೇಳಿದರು.
ಇದನ್ನೂ ಓದಿ: ಬಣ್ಣ ನಮ್ಮದು, ಶಾಲೆಗೆ ಸಹಾಯ ನಿಮ್ಮದು : ಬಣ್ಣ ದರ್ಪಣ ಅಭಿಯಾನ ಆರಂಭಿಸಿದ ಪ್ರಹ್ಲಾದ ಜೋಶಿ
''ನಾನು ಸಾಥಖೇಡ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿ. ನಮ್ಮ ಗ್ರಾಮಕ್ಕೆ ಹತ್ತು ವರ್ಷಗಳಿಂದ ಪ್ರೌಢಶಾಲೆಗೆ ಬೇಡಿಕೆ ಇದೆ. ಈ ಶಾಲೆಯಲ್ಲಿ ಸುಮಾರು 260ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪ್ರಾರಂಭಿಸಿದ್ದಾರೆ. ನಮ್ಮ ಗ್ರಾಮಕ್ಕೆ ಪ್ರೌಢಶಾಲೆ ಅತ್ಯವಶ್ಯಕ. ಈಗಾಗಲೇ ಗ್ರಾಮಸ್ಥರು ಹಾಗೂ ಹಿರಿಯರ ಮೂಲಕ ಶಾಸಕರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಮಾರ್ಟ್ಕ್ಲಾಸ್ ಹಾಗೂ ಶಾಲೆ ಸ್ಥಾಪಿಸಬೇಕೆಂದು ಶಾಸಕರಲ್ಲಿ ಮನವಿ ಮಾಡುತ್ತೇವೆ'' ಎಂದು ಹಳೆ ವಿದ್ಯಾರ್ಥಿ ಈರಣ್ಣ ಪೂಜಾರಿ ತಿಳಿಸಿದರು.
ಇದನ್ನೂ ಓದಿ: 53 ಸರ್ಕಾರಿ ಶಾಲೆ ಗೋಡೆಗಳ ಸುಂದರೀಕರಣ: ಸುಮನಾ ಫೌಂಡೇಶನ್ ಮೆಚ್ಚುಗೆ ಕಾರ್ಯ