ಕಲಬುರಗಿ : ಕಾಂಗ್ರೆಸ್ ಪಕ್ಷದ ನಾಯಕರಿಗೆ ಮಾಡಲು ಬೇರೆ ಕೆಲಸವಿಲ್ಲ. ಅದಕ್ಕೆ ಕೇವಲ ಆರೋಪ ಮಾಡುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ. ಹೀಗೆ ಮಾಡಿ ಕೇಂದ್ರದಲ್ಲಿ ಅತೀ ಹೆಚ್ಚು ಸ್ಥಾನವನ್ನು ಕಳೆದುಕೊಂಡು ಇಂದು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ಅವಕಾಶವನ್ನು ಸಹ ಕಳೆದುಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಇದು ಕೇವಲ ಕಾಂಗ್ರೆಸ್ ಪಕ್ಷ ಮತ್ತು ವಿರೋಧ ಪಕ್ಷದವರು ಹುಟ್ಟು ಹಾಕುತ್ತಿರುವ ಊಹೆಪೋಹಗಳು. 2023 ರಲ್ಲಿ ಬೊಮ್ಮಾಯಿ ನೇತೃತ್ವ ಮತ್ತು ಮಾಜಿ ಸಿಎಂ ಬಿಎಸ್‌ವೈ ಅವರ ಮಾರ್ಗದರ್ಶದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ ಎಂದರು.
ಕಾಂಗ್ರೆಸ್ ಟ್ವೀಟ್ ಕುರಿತು, ಹೀಗೆ ಮಾಡಿ ಅವರಿಗೆ ಅಧಿಕೃತವಾಗಿ ವಿರೋಧ ಪಕ್ಷದಲ್ಲಿ ಸಹ ಕುಳಿತುಕೊಳ್ಳುವಷ್ಟು ಅಂಕಿ ಸಂಖ್ಯೆ ಬಂದಿಲ್ಲ. ಅವರ ವರ್ತನೆ ಹೀಗೆ ಮುಂದುವರೆದರೆ ರಾಜ್ಯದ ಜನ ಮುಂದೆ ಸಹ ಪಾಠ ಕಲಿಸುತ್ತಾರೆ. ಮೊದಲು ಅವರ ಪಕ್ಷದಲ್ಲಿರುವ ಸಮಸ್ಯೆಯನ್ನು ಅವರು ಬಗೆಹರಿಸಿಕೊಳ್ಳಲಿ, ನಮ್ಮಲ್ಲಿ ಹಿರಿಯ ನಾಯಕರು ಮತ್ತು ಹೈಕಮಾಂಡ್ ಇದೆ ಎಂದು ಟಾಂಗ್ ಕೊಟ್ಟರು.
ಪ್ರಿಯಾಂಕ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ : ಒಳ್ಳೆಯ ಸುಸಂಸ್ಕೃತ ಮನೆತನದಿಂದ ಬಂದ ಯುವತಿಯರು, ತಮ್ಮ ಸ್ವಾಭಿಮಾನದಿಂದ ಪದವಿಯನ್ನು ಪಡೆದುಕೊಳ್ಳುತ್ತಾರೆ. ಪ್ರಿಯಾಂಕ್ ಖರ್ಗೆ ಅವರು ಇಂತಹ ಮಾತುಗಳನ್ನು ಹೇಳಬಾರದಿತ್ತು. ಈ ರೀತಿಯಾಗಿ ಅವರು ಪದ ಬಳಕೆ ಮಾಡಬಾರದು. ಇಂತಹ ಹೇಳಿಕೆಯಿಂದ ರಾಜ್ಯದ ಜನರಿಗೆ ಮನಸ್ಸಿಗೆ ನೋವು ಆಗಿದ್ದು, ಕೂಡಲೇ ಪ್ರಿಯಾಂಕ್ ಖಗರ್ಹೆ ಅವರು ಕ್ಷಮೆ ಯಾಚಿಸಬೇಕೆಂದು ಸಚಿವ ನಿರಾಣಿ ಆಗ್ರಹಿಸಿದರು.
ಇದನ್ನೂ ಓದಿ : ನಾಡಿನ ಹೆಣ್ಣು ಮಕ್ಕಳಿಗೆ ಅವಮಾನವಾಗುವ ರೀತಿ ನನ್ನ ಮಾತುಗಳಲ್ಲಿ ಅರ್ಥೈಸಿಲ್ಲ: ಪ್ರಿಯಾಂಕ್ ಖರ್ಗೆ