ಕಲಬುರಗಿ: ಆಸ್ತಿ ಕಲಹದ ಹಿನ್ನೆಲೆಯಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಧೋಳ ಪೊಲೀಸರು ಮೂವರು ಮಹಿಳೆಯರು ಸೇರಿ ಐವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಆಶಪ್ಪ, ರಾಮುಲು, ಪದ್ಮಮ್ಮ, ಲಾಲಮ್ಮ ಹಾಗೂ ಪವಿತ್ರಾ ಬಂಧಿತ ಆರೋಪಿಗಳು. ಹನುಮಂತ, ಸೀನಪ್ಪ ಮತ್ತು ಶರಣಪ್ಪ ಎಂಬ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಕರಣ ಹಿನ್ನೆಲೆ: ಜೂನ್ 12 ರಂದು ಸೇಡಂ ತಾಲೂಕಿನ ಮೇದಕ್ ಗ್ರಾಮದಲ್ಲಿ ಆಸ್ತಿಗಾಗಿ ತಂದೆ ಮತ್ತು ಇಬ್ಬರು ಮಕ್ಕಳನ್ನು ಆರೋಪಿಗಳು ಕೊಡಲಿಯಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು. ಘಟನೆಯಲ್ಲಿ ಮಲ್ಕಪ್ಪ ಹಾಗೂ ಆತನ ಮಕ್ಕಳಾದ ಶಂಕ್ರಪ್ಪ ಹಾಗೂ ಚನ್ನಪ್ಪ ಎಂಬುವರು ಕೊಲೆಯಾಗಿದ್ದರು. ಈ ಸಂಬಂಧ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತೆಲಂಗಾಣದ ವಿಠಲಾಪುರ ಗ್ರಾಮದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಮೀನು ಹಂಚಿಕೆ ವಿಚಾರವಾಗಿ ಹಾಗೂ 50 ಸಾವಿರ ರೂಪಾಯಿ ಹಳೇ ಬಾಕಿ ವಿವಾದದ ಹಿನ್ನೆಲೆ ಮೂವರನ್ನು ಕೊಲೆಗೈದಿದ್ದಾಗಿ ಆರೋಪಿಗಳು ಸ್ವತಃ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಹಾಗೂ ಕೊಲೆಯಾದವರು ಸೋದರ ಸಂಬಂಧಿಗಳಾಗಿದ್ದಾರೆ. ಜಮೀನಿನ ವೈಷಮ್ಯಕ್ಕೆ ಮೂವರನ್ನು ಕೊಲೆಗೈದು ಸದ್ಯ ಆರೋಪಿಗಳು ಜೈಲು ಪಾಲಾಗಿದ್ದಾರೆ. ಮುಧೋಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.