ಕಲಬುರಗಿ: ಕಲಬುರಗಿಯಲ್ಲಿ ಎರಡು ವರ್ಷಗಳಿಂದ ದಿಶಾ ಮೀಟಿಂಗ್ ಆಗಿಲ್ಲ. ಶನಿವಾರ ಫಿಕ್ಸ್ ಆಗಿದ್ದ ದಿಶಾ ಮೀಟಿಂಗ್ ಮತ್ತೆ ಮುಂದೂಡಲಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆದರೂ ಮೀಟಿಂಗ್ ಮಾಡ್ತಿಲ್ಲ. ಮೀಟಿಂಗ್ ಮಾಡಿದರೆ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಆಗುತ್ತವೆ. ಆದಷ್ಟು ಬೇಗ ದಿಶಾ ಮೀಟಿಂಗ್ ಆಗಬೇಕು ಎಂದು ಸಂಸದ ಉಮೇಶ್ ಜಾಧವ್ ಆಗ್ರಹಿಸಿದರು. ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 27ರಂದು ಜರುಗಬೇಕಿದ್ದ ದಿಶಾ ಸಭೆ ಮತ್ತೆ ಮುಂದೂಡಲಾಗಿದೆ. ಇತ್ತ ಅವರ ಪುತ್ರ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಸಹ ಕೆಡಿಪಿ ಸಭೆ ಮಾಡುತ್ತಿಲ್ಲ. ಹೀಗಾಗಿ ಜಿಲ್ಲೆಯ ಭೀಕರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗದಂತಾಗಿದೆ ಎಂದು ಜಾಧವ್ ಅಸಮಾಧಾನ ಹೊರಹಾಕಿದರು.
ಕೆಲವು ಊರುಗಳಲ್ಲಿ ಮರಳು ದಂಧೆ ನಡೆಯುತ್ತಿದೆ. ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ, ಇದಕ್ಕೆಲ್ಲ ಕಡಿವಾಣ ಬೀಳಬೇಕು. ಜಿಲ್ಲೆಯಲ್ಲಿ ಮಳೆಯಾಗದೇ ಭೀಕರ ಬರಗಾಲ ಎದುರಾಗಿದೆ. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳಾದರೂ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಹದಗೆಟ್ಟ ರಸ್ತೆಗಳಿಂದ ಅಪಘಾತಗಳುಂಟಾಗಿ ಅಮಾಯಕರು ಸಾವಿಗೀಡಾಗುತ್ತಿದ್ದಾರೆ. ಅಂತಹ ರಸ್ತೆಗಳನ್ನು ದುರಸ್ತಿ ಸಹ ಮಾಡುತ್ತಿಲ್ಲ. ಹೀಗಾಗಿ ಕೆಡಿಪಿ ಹಾಗೂ ದಿಶಾ ಸಭೆಯ ಮೂಲಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅಂತಹ ಸಭೆಗಳನ್ನು ಮಲ್ಲಿಕಾರ್ಜುನ್ ಖರ್ಗೆ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಸಂಸದನಾಗಿ ದಿಶಾ ಸಭೆಯನ್ನು ಕರೆಯಲು ಬರುವುದಿಲ್ಲ. ಶಿಷ್ಟಾಚಾರದಂತೆ ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರೇ ಕರೆಯಬೇಕು. ಅವರು ಕರೆಯದೇ ಹೋದಲ್ಲಿ ಹದಿನೈದು ದಿನಗಳಲ್ಲಿ ಪರ್ಯಾಯವಾಗಿ ಸಭೆ ಮಾಡಬಹುದಾಗಿದೆ. ಅಂತಹ ನಿರ್ಧಾರವನ್ನು ದಿಶಾ ಕಮಿಟಿ ಕಾರ್ಯದರ್ಶಿಗಳು ಕೈಗೊಳ್ಳಬೇಕಾಗುತ್ತದೆ. ಈ ಸಂಬಂಧ ಕಾರ್ಯದರ್ಶಿಗಳೊಂದಿಗೆ ಮಾತನಾಡುವುದಾಗಿ ಅವರು ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲ ಇಲಾಖೆಗಳು ಹದಗೆಟ್ಟಿವೆ ಅನ್ನೋ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಯಾವುದೇ ಇಲಾಖೆಗಳು ಹದಗೆಟ್ಟಿಲ್ಲ. ಪ್ರಿಯಾಂಕ್ ಖರ್ಗೆ ಸುಳ್ಳು ಹೇಳುತ್ತಿದ್ದಾರೆ. ಇಲಾಖೆಗಳು ಹದಗೆಟ್ಟಿವೆ ಅಂದರೆ ಆರು ತಿಂಗಳು ಬೇಕಾ? ಇವರಿಗೆ ಸರಿಪಡಿಸಲು. ನಾವು ರಾಜಕೀಯ ಮಾಡ್ತಿಲ್ಲ, ರಾಜಕೀಯ ಮಾಡೋದು ನಮಗೆ ಬೇಕಿಲ್ಲ. ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಕರೆಸಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಪರಿಹಾರಕ್ಕಾಗಿ ಸಭೆ ಕರೆಯಲು ಹೇಳ್ತಿದ್ದೇವೆ ಎಂದರು.
ಇದನ್ನೂ ಓದಿ: ದೆಹಲಿ ರೀತಿಯಲ್ಲಿ 'ಕರ್ನಾಟಕ ಕ್ಯಾಪಿಟಲ್ ರೀಜನ್' ಮಾಡಿ: ಬಿಜೆಪಿ ಶಾಸಕ ಅರವಿಂದ ಬೆಲ್ಲದ್