ಕಲಬುರಗಿ : ರಾಜ್ಯಕ್ಕೆ ಮೋದಿ ಬರುತ್ತಾರೆ ಎಂದರೆ ಕಾಂಗ್ರೆಸ್ - ಜೆಡಿಎಸ್ ಪಕ್ಷಕ್ಕೆ ನಡುಕು ಪ್ರಾರಂಭವಾಗುತ್ತೆ. ಹಾಗಾಗಿ ಎರಡು ಪಕ್ಷಗಳು ಇಲ್ಲ ಸಲ್ಲದನ್ನು ಮಾತನಾಡಲು ಶುರು ಮಾಡುತ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಕಲಬುರಗಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ನೀಡಬಹುದಾದ ಲಂಬಾಣಿ ಸಮುದಾಯದ ಹಕ್ಕು ಪತ್ರ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುತ್ತಿದ್ದಾರೆ. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಮಾಡುತ್ತಿದ್ದು, ತಮ್ಮ ಚುನಾವಣೆ ಪ್ರಚಾರಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಈ ಆರೋಪಕ್ಕೆ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದರು.
ದೇಶದ ಪ್ರಧಾನಿಯೊಬ್ಬರು ತಾಂಡಾದ ಬಡ ಜನರಿಗೆ ನಿವೇಶನ ನೀಡಿ ಅವರ ಧ್ವನಿಗೆ ಸ್ಪಂದಿಸಿಲು ನಾನೇ ಬಂದು ಹಕ್ಕು ಪತ್ರ ನೀಡುತ್ತೇನೆ ಎನ್ನುವಾಗ ಕುಮಾರಸ್ವಾಮಿ ಸ್ವಾಗತಿಸಬೇಕು ಎಂದು ಆರ್. ಆಶೋಕ್ ಹೇಳಿದರು. ಸ್ವತಃ ಪ್ರಧಾನಿಯವರೇ ಬರುತ್ತೇನೆ ಎಂದಾಗ, ತಾಂಡಾದ ಜನರೆ ಬಾ ಎನ್ನುವಾಗ ಇವರಿಗೆ ಯಾಕೆ ಉರಿ? ಏನಾದರೂ ಆಪಾದನೆ ಮಾಡೋದು ಸರಿಯಲ್ಲ ಎಂದು ಕಿಡಿಕಾಡಿದರು. ಕುಮಾರಸ್ವಾಮಿ ಹೇಳುವ ಹಾಗೆ ನಾವು ಬಲವಂತವಾಗಿ ಲಂಬಾಣಿ ಸಮುದಾಯವನ್ನು ಸೇರಿಸುತ್ತಿಲ್ಲ. ನಿವೇಶನ ಅನ್ನೋದು ಮನುಷ್ಯನ ಜೀವನದ ಪ್ರಮುಖ ಆಧಾರ, ನಾವು ಬೇಡ ಎಂದರು ಕೂಡ ತಾವಾಗಿಯೇ ಬರುತ್ತಾರೆ. ಹೀಗಿರುವಾಗ ಬಲವಂತದಿಂದ ಕರೆತರುವ ಪ್ರಶ್ನೆ ಎಲ್ಲಿಂದ ಬಂತು ಎಂದರು.
ಇದೇ ವೇಳೆ, ಬಿಜೆಪಿಯವರಿಗೆ ಇದು ಕೊನೆಯ ಚುನಾವಣೆ ಎಂಬ ಕುಮಾರಸ್ವಾಮಿ ಹೇಳಿಕೆ ಪ್ರತಿಕ್ರಿಯಿಸಿದ ಆರ್. ಅಶೋಕ್, ಇವರ ಈ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಹೇಳಿದರು. ಇವರಿಗೆ ಏನ್ ಕನಸು ಬಿದ್ದಿತ್ತಾ? ದಿನದಿಂದ ದಿನಕ್ಕೆ ರಾಜ್ಯದಲ್ಲಿ ಜೆಡಿಎಸ್ ಕುಸಿಯುತ್ತಿರುವ ಭಯದಲ್ಲಿ ಕುಮಾರಸ್ವಾಮಿ ಹೀಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು .
ಜೆಡಿಎಸ್ ಪಕ್ಷದ ಗ್ರಾಫ್ ಇಳಿಕೆ :ಈ ಹಿಂದೆ ದೇವೇಗೌಡರು ಸಿಎಂ ಆಗಿದ್ದಾಗ 120 ರಿಂದ 130 ಸ್ಥಾನ ಕರ್ನಾಟಕದಲ್ಲಿ ಜೆಡಿಎಸ್ ಹೊಂದಿತ್ತು. ಬಳಿಕ 57 ಕ್ಕೆ, ತದನಂತರ 35 ಕ್ಕೆ ಇಳಿಕೆಯಾಗಿದೆ. ಚುನಾವಣೆ ಬರುವಷ್ಟರಲ್ಲಿ ಇನ್ನೊಂದಿಷ್ಟು ಜನ ಬಿಟ್ಟು ಹೋಗಿ 25 ಸ್ಥಾನಕ್ಕೆ ತಲುಪಲಿದ್ದು, ಜೆಡಿಎಸ್ ಪಕ್ಷದ ಗ್ರಾಫ್ ಇಳಿಕೆಯಾದಂತೆ ಕುಮಾರಸ್ವಾಮಿಗೆ ಭಯ ಹೆಚ್ಚಾಗುತ್ತಿದೆ ಎಂದು ಆರ್.ಆಶೋಕ್ ತಿವಿದರು.
ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಬಾರದು, ಸಿಕ್ಕರೆ ನಾನು ಮದ್ಯ ತೂರೋದು ಹೇಗೆ ಎಂಬ ಭಯದಲ್ಲಿ ಕುಮಾರಸ್ವಾಮಿ ಅವರಿದ್ದಾರೆ. ಇನ್ನೊಂದಡೆ ಸ್ಪಷ್ಟ ಬಹುಮತದೊಂದಿಗೆ ಆಡಳಿತಕ್ಕೆ ಬರಲಿದ್ದೇವೆ ಎಂದು ಅವರು ಹೇಳುತ್ತಿದ್ದಾರೆ. ಆದರೆ, ಮೊದಲು ರಾಜ್ಯದ ಎಲ್ಲ 224 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿ, ಆಮೇಲೆ ಬಹುಮತದಿಂದ ಅಧಿಕಾರಕ್ಕೆ ಬರುವ ಬಗ್ಗೆ ಮಾತನಾಡಲಿ ಎಂದು ಆರ್.ಆಶೋಕ್ ಸವಾಲು ಹಾಕಿದರು.
ಮಠದ ಸ್ವಾಮೀಜಿಗಳು ಚುನಾವಣೆಗೆ ಪ್ರವೇಶ ? :ಇದೇ ಸಂದರ್ಭದಲ್ಲಿ ಮಠದ ಸ್ವಾಮೀಜಿಗಳನ್ನು ಬಿಜೆಪಿ ಪಕ್ಷದಿಂದ ಚುನಾವಣೆ ಅಭ್ಯರ್ಥಿಯಾಗಿ ಘೋಷಣೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಆರ್.ಅಶೋಕ್ ಉತ್ತರಿಸಿದರು. ಈ ವಿಚಾರ ನೂರಕ್ಕೆ ನೂರು ಸತ್ಯಕ್ಕೆ ದೂರವಾದ ಮಾತು. ನಮ್ಮ ಪಾರ್ಟಿ ಯಾವ ಮಠದ ಸ್ವಾಮೀಜಿಗಳನ್ನು ಚುನಾವಣೆಗೆ ಕರೆತರುವಂತ ಕಾರ್ಯವನ್ನು ಮಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಹಾಗೂ ಆದಿಚುಂಚನಗಿರಿ ಮಠದ ನಿರ್ಮಲನಂದಾ ಸ್ವಾಮೀಜಿ ಅವರು ಹೇಳಿದರೆ ಚುನಾವಣೆಗೂ ನನಗೂ ಯಾವುದೇ ಸಂಬಂಧವಿಲ್ಲ, ನಾನು ಆ ದಿಕ್ಕನ್ನೂ ತಿರುಗಿ ನೋಡಿವುದಿಲ್ಲ ಎಂದು ಹೇಳಿದ್ದಾರೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ :ಮೀಸಲಾತಿ ಬಗ್ಗೆ ಸಂಶಯ ಬೇಡ, ಸ್ಪಷ್ಟ ತೀರ್ಮಾನ ಮಾಡಲಾಗಿದೆ: ಸಚಿವ ಆರ್.ಅಶೋಕ್