ಕಲಬುರಗಿ: ಪ್ರಯಾಣಿಕರ ಸೋಗಿನಲ್ಲಿ ರೈಲು ಹತ್ತಿ, ಮುಂದಿನ ನಿಲ್ದಾಣ ಬರುವುದರೊಳಗೆ ಮೊಬೈಲ್ಗಳನ್ನು ಕದ್ದು ಪರಾರಿಯಾಗುತ್ತಿದ್ದ ಖತರ್ನಾಕ ಕಳ್ಳರನ್ನು ವಾಡಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಯಾದಗಿರಿಯ ನಿವಾಸಿ ಜಾಮೇಶ್ ಪೂಜಾರಿ (26) ಹಾಗೂ ಚಿತ್ತಾಪುರ ತಾಲೂಕು ಸೂಲಹಳ್ಳಿ ಗ್ರಾಮದ ಹನುಮಂತ ಪಾಳೇದಾರ (28) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ 27 ಮೊಬೈಲ್, 45 ಗ್ರಾಂ ಚಿನ್ನಾಭರಣ ಸೇರಿದಂತೆ ಒಟ್ಟು 4.30 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಸದ್ಯ ಎಂಟು ಪ್ರಕರಣಗಳಲ್ಲಿ ಇವರನ್ನು ಬಂಧಿಸಲಾಗಿದೆ.
ಖತರ್ನಾಕ್ ಕಳ್ಳರು ಒಂದು ಬಾರಿ ರೈಲು ಹತ್ತಿದರೆ ಕನಿಷ್ಠ ಮೂರ್ನಾಲ್ಕು ಮೊಬೈಲ್ಗಳನ್ನು ಕದ್ದು ಪರಾರಿಯಾಗುತ್ತಿದ್ದರು. ಮೊಬೈಲ್ಗಳು ಸಿಗದಿದ್ದರೆ ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದರು. ಇಂದು ಮಧ್ಯಾಹ್ನ ಚೆನ್ನೈ-ಮುಂಬೈ ರೈಲಿನಲ್ಲಿ ಕಳ್ಳರು ತಮ್ಮ ಕೈಚಳಕ ತೋರುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ರೈಲು ವಾಡಿ ಸ್ಟೇಷನ್ ತಲುಪುತ್ತಿದ್ದಂತೆ ಅವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.