ಸೇಡಂ (ಕಲಬುರಗಿ): ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳಾದ ಮಳಖೇಡ, ಸಟಪಟನಹಳ್ಳಿ, ಬಿಬ್ಬಳ್ಳಿಗೆ ಭೇಟಿ ನೀಡಿದ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಜನರ ಅಳಲನ್ನು ಆಲಿಸಿದರು.
ಮನೆ ಹಾನಿಗೊಳಗಾದ ಜನರಿಗೆ ಮಾನದಂಡಗಳ ಪ್ರಕಾರ ತಕ್ಷಣಕ್ಕೆ 5ರಿಂದ 10 ಸಾವಿರ ಪರಿಹಾರ ಕಲ್ಪಿಸಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ನೀರಾವರಿ ಮತ್ತು ಒಣ ಬೇಸಾಯಕ್ಕೆ ಬೇರೆ ಬೇರೆ ರೀತಿಯ ಹಣ ಕೇಂದ್ರ ಸರ್ಕಾರಿ ನಿಗಧಿ ಮಾಡಿದೆ. ಅದನ್ನು ಸಹ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಿಲುಕಿದ 6 ಜನರನ್ನು ರಕ್ಷಿಸಲಾಗಿದೆ. ಎನ್.ಡಿ.ಆರ್.ಎಫ್ ತಂಡ ತಮ್ಮ ಜೀವದ ಹಂಗನ್ನು ತೊರೆದು ರಕ್ಷಿಸಿದ್ದಾರೆ. ತೆಲ್ಕೂರ ಗ್ರಾಮದಲ್ಲಿ 30 ಜನ ನಡುಗಡೆಯಲ್ಲಿ ಸಿಲುಕಿದ್ದವರನ್ನು ಪೊಲೀಸರು ರಕ್ಷಿಸಿದ್ದಾರೆ. ಮಳಖೇಡದ ಜಯತೀರ್ಥರ ಉತ್ತರಾಧಿ ಮಠದಲ್ಲಿ 16 ಜನ ಭಕ್ತರು ಸೇರಿದಂತೆ 110 ಹಸುಗಳು ಸಿಲುಕಿವೆ. ಅವುಗಳ ರಕ್ಷಣೆಗಾಗಿ ಎನ್.ಡಿ.ಆರ್.ಎಫ್ ತಂಡ ಬರಲಿದೆ ಎಂದರು.
ನಿರಂತರ ಮಳೆಯಿಂದ ಜನರ ಜೀವನ ದುಸ್ತರವಾಗಿದೆ. ಹಲವಾರು ಮನೆಗಳು ನೀರಿನಿಂದ ಜಲಾವೃತವಾಗಿ, ಜನ ಸಂಕಷ್ಟ ಎದುರಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರವಾಹದ ಹೊಡೆತಕ್ಕೆ ಸಿಲುಕಿದವರನ್ನು ಭೇಟಿಯಾಗಿ ಸಮಸ್ಯೆ ಆಲಿಸಿದ್ದೇನೆ. ಹೊಲಗದ್ದೆಗಳಲ್ಲಿ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಕಂದಾಯ ಸಚಿವರೊಂದಿಗೆ ನೇರ ಸಂಪರ್ಕದಲ್ಲಿದ್ದು, ಮತ್ತೊಮ್ಮೆ ಬೆಳೆ ಸಮೀಕ್ಷೆ ನಡೆಸುವಂತೆ ಕೋರಿದ್ದೇನೆ. ನೂರಾರು ಕೋಟಿಯ ರಸ್ತೆ, ಡ್ಯಾಂಗಳನ್ನು ಪುನರ್ ನಿರ್ಮಿಸಲು ಅನುದಾನ ಬಿಡುಗಡೆಗೆ ಮನವರಿಕೆ ಮಾಡಲಾಗುತ್ತಿದೆ ಎಂದರು.
ಧವಸ ಧಾನ್ಯ ಹಾನಿಯಾದ ಮನೆಗಳಿಗೆ ತಕ್ಷಣ ಎರಡು ಮುರು ದಿನಗಳಲ್ಲಿ ಪರಿಹಾರ ಕಲ್ಪಿಸಲಾಗುವುದು. 10 ಕಡೆ ಗಂಜಿ ಕೇಂದ್ರ ಪ್ರಾರಂಭ ಮಾಡಲಾಗುತ್ತಿದೆ. ಮೂರು ಸಾವಿರ ಜನರಿಗೆ ಊಟ, ವಸತಿ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ತೀವ್ರಗತಿಯಲ್ಲಿ ಹರಿಯುತ್ತಿರುವ ಮಳಖೇಡ ಗ್ರಾಮದ ಕಾಗೀಣಾ ನದಿಯನ್ನು ವೀಕ್ಷಿಸಿದ ಶಾಸಕ ರಾಜಕುಮಾರ ಪಾಟೀಲ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಲಕ್ಷಾಂತರ ಕ್ಯೂಸೆಕ್ ನೀರು ಬಿಡುಗಡೆಯಾಗಲಿರುವ ಸಂಬಂಧ ಇಡೀ ಮಳಖೇಡ ಗ್ರಾಮ ಮುಳುಗಡೆಯಾಗುವ ಸಂಭವವಿದೆ. ಅದಕ್ಕಾಗಿ ಎತ್ತರದ ಪ್ರದೇಶಗಳನ್ನು ಗುರುತಿಸಲಾಗುತ್ತಿದೆ ಎಂದು ತಹಸೀಲ್ದಾರ್ ಬಸವರಾಜ ಬೆಣ್ಣೆ ಶಿರೂರ ಇದೇ ವೇಳೆ ಮಾಹಿತಿ ನೀಡಿದರು.