ಕಲಬುರಗಿ: ಹೆಸರು ಹಾಗೂ ಉದ್ದು ಖರೀದಿ ಕೇಂದ್ರ ಸ್ಥಾಪನೆಗೆ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸುತ್ತಿದ್ದು, ರೈತರು ತಾವು ಬೆಳೆದ ಬೆಳೆಯನ್ನು ಕಡಿಮೆ ದರದಲ್ಲಿ ಮಾರಾಟ ಮಾಡಿ ನಷ್ಠ ಅನುಭವಿಸುತ್ತಿದ್ದಾರೆ. ನಿದ್ದೆಯಲ್ಲಿರುವ ಸರ್ಕಾರ ನಮ್ಮ ಭಾಗದ ರೈತರ ಕಡೆ ಗಮನ ಹರಿಸಲಿ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಶಾಸಕರು, ಧಾನ್ಯಗಳ ನಾಡು ಕಲಬುರಗಿಯಲ್ಲಿ ಹೆಸರು ಹಾಗೂ ಉದ್ದು ಮಾರುಕಟ್ಟೆಗೆ ಬಂದಿವೆ. ಎಂಎಸ್ಪಿ ದರದಲ್ಲಿ ಸದರಿ ಧಾನ್ಯ ಖರೀದಿಸಲು ರಾಜ್ಯ ಸರ್ಕಾರ ಖರೀದಿ ಕೇಂದ್ರ ಸ್ಥಾಪಿಸದೆ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ. ಹಾಗಾಗಿ ರೈತರು ತಾವು ಬೆಳೆದ ಬೆಳೆಯನ್ನು ಕಡಿಮೆ ದರದಲ್ಲಿ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಎರಡು ಪತ್ರ ಬರೆದು ಸರ್ಕಾರಕ್ಕೆ ಎಚ್ಚರಿಸಿದ್ದರೂ ಕೂಡ ನಿದ್ದೆಯಿಂದ ಎದ್ದಿಲ್ಲ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲ ತಿಂಗಳ ಹಿಂದೆ ಹೆಸರು ಕ್ವಿಂಟಾಲ್ ರೂ. 9,000ದಂತೆ ಮಾರಾಟ ಮಾಡಲಾಗುತ್ತಿತ್ತು. ಆದರೆ, ಈಗ ಧಾರಣೆ ರೂ. 4-5 ಸಾವಿರಕ್ಕೆ ಕುಸಿದಿದೆ. ಜೊತೆಗೆ ಸರ್ಕಾರವೂ ಕೂಡ ಈಗಾಗಲೇ ನಿರ್ಧರಿಸಿರುವಂತೆ ಪ್ರತೀ ಕ್ವಿಂಟಾಲ್ಗೆ ರೂ. 7,196ನಂತೆ ಖರೀದಿಸದ ಕಾರಣ ರೈತರು ಕಡಿಮೆ ಬೆಲೆಯಲ್ಲಿ ಹೆಸರು ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಒಂದು ಕಡೆ ಮಾರುಕಟ್ಟೆಯಲ್ಲಿ ದರ ಕುಸಿದಿದ್ದರೆ, ಮತ್ತೊಂದು ಕಡೆ ನಿರಂತರ ಮಳೆ ಸುರಿದ ಕಾರಣ ರೈತರು ಕಟಾವು ಮಾಡಲಾಗದೆ ಹೆಸರು ಜಮೀನಿನಲ್ಲಿಯೇ ಮೊಳೆಕೆಯೊಡೆಯುತ್ತಿದೆ.
ಹಿಂಗಾರು ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿ ಸೇರಿದಂತೆ ಇತರೆ ಖರ್ಚುಗಳಿಗೆ ಹಣ ಸರಿದೂಗಿಸಲು ಕಷ್ಟ ಪಡುತ್ತಿರುವ ರೈತರಿಗೆ ಸಾಲ ಮರುಪಾವತಿ ಮತ್ತೊಂದು ಸಂಕಷ್ಟ ತಂದೊಡ್ಡಿದೆ. ಇಂತಹ ಸಂದರ್ಭಗಳಲ್ಲಿ ರೈತರಿಗೆ ಸಹಾಯ ಮಾಡಬೇಕಿರುವ ಸರ್ಕಾರ ನಿದ್ದೆಯಿಂದ ಎದ್ದಿಲ್ಲ. ಸಿಎಂ ಯಡಿಯೂರಪ್ಪನವರು ನಮ್ಮ ಭಾಗದ ರೈತರ ಕಡೆ ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.