ಕಲಬುರಗಿ: ನವೀಕರಿಸಬಹುದಾದ ಇಂಧನ ಅಭಿವೃದ್ದಿ ಪ್ರಾದೇಶಿಕ ಕಚೇರಿಯನ್ನು ಕಲಬುರಗಿಯಲ್ಲೇ ಉಳಿಸುವಂತೆ ಆಗ್ರಹಿಸಿ ಸಿಎಂ ಬಿ ಎಸ್ ಯಡಿಯೂರಪ್ಪಗೆ ಕೆಪಿಸಿಸಿ ವಕ್ತಾರರು, ಶಾಸಕ ಪ್ರಿಯಾಂಕ್ ಖರ್ಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಪ್ರಮಖ ಕೇಂದ್ರವಾದ ಕಲಬುರಗಿಯಲ್ಲಿ ನವೀಕರಿಸಬಹುದಾದ ಇಂಧನ ಅಭಿವೃದ್ದಿ ಪ್ರಾದೇಶಿಕ ಕಚೇರಿ ಮಂಜೂರಾಗಿ ಉದ್ಘಾಟನೆಗೊಂಡಿತ್ತು. ಆದರೆ, ಸದ್ಯದ ಮಾಹಿತಿ ಪ್ರಕಾರ ಪ್ರಾದೇಶಿಕ ಕಚೇರಿಯನ್ನು ಕಲಬುರಗಿಯಿಂದ ಬೇರೆಡೆ ಸ್ಥಳಾಂತರಿಸುವ ಮಾಹಿತಿ ಲಭ್ಯವಾಗಿದೆ. ಹಾಗಾಗಿ, ಈ ಕೂಡಲೇ ಸಿಎಂ ಯಡಿಯೂರಪ್ಪ ಕಚೇರಿಯನ್ನು ಕಲಬುರಗಿಯಲ್ಲಿಯೇ ಉಳಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ನವೀಕರಿಸಬಹುದಾದ ಇಂಧನ ಅಭಿವೃದ್ದಿ ಕಚೇರಿಯಿಂದಾಗಿ ಹಿಂದುಳಿದ ಕಲ್ಯಾಣ ಕರ್ನಾಟಕದಲ್ಲಿ ಆಗಬಹುದಾಗದ ಪ್ರಮುಖ ಅನುಕೂಲಗಳನ್ನು ಹೆಸರಿಸಿರುವ ಶಾಸಕರು, ಈ ಭಾಗದ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸೋಲಾರ್ ಪೆನೆಲ್ ದೊರಕಿಸಿಕೊಡಬಹುದು. ಜೊತೆಗೆ ಸೋಲಾರ್ ಪಾರ್ಕ್ ನಿರ್ಮಾಣ ಮತ್ತು ವಿಂಡ್ ಮಿಲ್ ಸ್ಥಾಪನೆ ಮಾಡಬಹುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ನೀರಾವರಿ ಕೊರತೆ ಬಹಳಷ್ಟಿದ್ದು, ನೀರಿನ ಸಮಸ್ಯೆ ನೀಗಿಸಲು ನೀರಿನ ಕಾಲುವೆಯುದ್ದಕ್ಕೂ ಅಥವಾ ನದಿಗಳಿಗೆ ಸೋಲಾರ್ ಪೆನೆಲ್ ಅಳವಡಿಸಿ ಜಮೀನುಗಳಿಗೆ ನೀರು ಹರಿಸಬಹುದಾಗಿದೆ. ಇದರಿಂದ ರೈತರ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಇದರ ಜೊತೆಗೆ ಇನ್ನಿತರ ಪ್ರಮಖ ಕಾರ್ಯಕ್ರಮಗಳನ್ನು ರೂಪಿಸುವುದರ ಮೂಲಕ ಈ ಭಾಗದ ಸಮಗ್ರ ಅಭಿವೃದ್ದಿಗೆ ನಿಗಮದ ಪ್ರಾದೇಶಿಕ ಕಚೇರಿ ಪ್ರಮಖ ಪಾತ್ರ ವಹಿಸಲಿದೆ ಎಂದು ಶಾಸಕರು ಒತ್ತಿ ಹೇಳಿದ್ದಾರೆ.
ಓದಿ: ಕಲಬುರಗಿಯಲ್ಲಿ ಅಕ್ರಮ ದಂಧೆಗಳಿಗೆ ಆಡಳಿತ ಪಕ್ಷದ ಕೃಪಾಕಟಾಕ್ಷ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಸ್ತುತ ಸರ್ಕಾರ ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ನಿರಾಸಕ್ತಿ ತೋರಿಸುತ್ತಿದ್ದು, ಕಚೇರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಮೂಲಕ ಮತ್ತೊಮ್ಮೆ ಈ ಭಾಗಕ್ಕೆ ಅನ್ಯಾಯ ಮಾಡಿದಂತಾಗಿದೆ ಎಂದು ಪ್ರಿಯಾಂಕ್ ಖರ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ. ಈಗಾಗಲೇ ಉದ್ಘಾಟನೆಗೊಂಡ ಕಚೇರಿಯನ್ನು ಕಲಬುರಗಿಯಿಂದ ಬೇರೆಡೆ ಸ್ಥಳಾಂತರಿಸದೇ ಕಲಬುರಗಿಯಲ್ಲೇ ಉಳಿಸಬೇಕೆಂದು ಅವರು ಸಿಎಂ ಅವರನ್ನು ಆಗ್ರಹಿಸಿದ್ದಾರೆ.