ಕಲಬುರಗಿ: ಮಹಾಮಾರಿ ಕೊರೊನಾ ಅಟ್ಟಹಾಸ ಮೆರೆಯುತ್ತಿರುವ ಈ ಸಂದರ್ಭದಲ್ಲಿಯೂ ಸರ್ಕಾರ ಅಧಿಕಾರಿಗಳ ವರ್ಗಾವಣೆ ದಂಧೆಗೆ ಮುಂದಾಗಿದೆ ಎಂದು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆ ಕಮಿಷನರ್ ವರ್ಗಾವಣೆ ಬೆನ್ನಲ್ಲೆ ಸರಣಿ ಟ್ವೀಟ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿರುವ ಶಾಸಕ ಖರ್ಗೆ, ಕಮಿಷನರ್ ಆ ಹುದ್ದೆಯಲ್ಲಿದ್ದುದು ಕೇವಲ ಆರು ತಿಂಗಳು ಮಾತ್ರ. ಪ್ರಸ್ತುತ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಈ ಸಂದರ್ಭದಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಇದು ಸರಕಾರದ ಅನಗತ್ಯ ಕ್ರಮವಾಗಿದೆ ಎಂದು ಶಾಸಕರು ಹರಿಹಾಯ್ದಿದ್ದಾರೆ.
"ನಾನು ಪದೇ ಪದೆ ಹೇಳುತ್ತಿದ್ದೇನೆ ಅಧಿಕಾರಿಗಳ ವರ್ಗಾವಣೆ ಒಂದು ದಂಧೆಯಾಗಿ ಮಾರ್ಪಟ್ಟಿದ್ದು, ಇದರಿಂದಾಗಿ ಕಲಬುರಗಿ ಭ್ರಷ್ಟಾಚಾರದ ಕೂಪದಂತಾಗಿದೆ. ಈ ಮುಂಚೆ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿ ವಿರೋಧ ವ್ಯಕ್ತವಾದಾಗ ವರ್ಗಾವಣೆ ತಡೆ ಹಿಡಿಯಲಾಗಿತ್ತು. ಈಗ ಕಮಿಷನರ್ ವರ್ಗಾವಣೆಯಾಗಿದೆ. ಅಧಿಕಾರಿಗಳ ವರ್ಗಾವಣೆ ಮಾಡಿಸುವುದರ ಬದಲು ಬಿಜೆಪಿ ನಾಯಕರು ಕೊರೊನಾ ವಿರುದ್ಧದ ಹೋರಾಟಕ್ಕೆ ಪ್ರಾಮುಖ್ಯತೆ ನೀಡಲಿ" ಎಂದು ಪ್ರಿಯಾಂಕ್ ಖರ್ಗೆ ಕಟು ಟೀಕೆ ಮಾಡಿದ್ದಾರೆ.
ಕೋವಿಡ್ ಪರೀಕ್ಷಾ ಕೇಂದ್ರ ಹೆಚ್ಚಳಕ್ಕೆ ಆಗ್ರಹ: ಕೊರೊನಾ ಸೋಂಕು ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿದೆ. ಜಿಲ್ಲೆಯ ಜಿಮ್ಸ್ ಆಸ್ಪತ್ರೆಯಲ್ಲಿ ಒಂದು ಲ್ಯಾಬ್ ಮಾತ್ರ ಆರಂಭಿಸಲಾಗಿದೆ. ಇಲ್ಲಿ ದಿನಕ್ಕೆ ಸಾವಿರ ಮಾದರಿಗಳ ಪರೀಕ್ಷೆ ಮಾತ್ರ ಸಾಧ್ಯವಿದೆ.
ಪ್ರಸ್ತುತ ಜಿಮ್ಸ್ ಕೇಂದ್ರದಿಂದ ಹೆಚ್ಚುವರಿಯಾದ ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಹಾಗಾಗಿ ವರದಿ ಅಧಿಕಾರಿಗಳ ಕೈಸೇರಲು ವಾರಗಟ್ಟಲೆ ತಡವಾಗುತ್ತಿದೆ. ಈಗ ಕನಿಷ್ಠ 5000 ಅಧಿಕ ವರದಿಗಳು ಬಾಕಿ ಇವೆ. ವರದಿ ವಿಳಂಬವಾಗುತ್ತಿರುವುದರಿಂದಾಗಿ ಸೋಂಕಿತರಿಂದ ಜನರಿಗೆ, ವೈದ್ಯರಿಗೆ, ಪೊಲೀಸರಿಗೆ ಹಾಗೂ ಇತರ ಸಿಬ್ಬಂದಿಗಳಿಗೆ ಸೋಂಕು ತಗುಲುವ ಭೀತಿ ಎದರಾಗಿದೆ.
ಇದಲ್ಲದೇ ಬೇರೆ ರಾಜ್ಯಗಳಿಂದ ಕಲಬುರಗಿ ಜಿಲ್ಲೆಗೆ ಬರುವ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಪರಿಣಾಮ ಆರೋಗ್ಯ ಇಲಾಖೆ ನಿತ್ಯ 2500 ಕ್ಕೂ ಅಧಿಕ ಮಾದರಿ ಸಂಗ್ರಹ ಮಾಡುತ್ತಿದ್ದು, ತೀವ್ರ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗಾಗಿ, ಈ ಕೂಡಲೇ ಇಎಸ್ ಐಸಿ ಆಸ್ಪತ್ರೆಯಲ್ಲಿ ಹೆಚ್ಚುವರಿ ಪರೀಕ್ಷಾ ಕೇಂದ್ರ ಸ್ಥಾಪಿಸಿ ತೀವ್ರಗತಿ ಹಾಗೂ ಪರಿಣಾಮಕಾರಿ ಮಾದರಿ ಪರೀಕ್ಷೆ ನಡೆಸಿ ಸೋಂಕಿತರಿಗೆ ತಕ್ಷಣ ಚಿಕಿತ್ಸೆ ನೀಡಬೇಕಾಗಿದೆ ಎಂದು ಶಾಸಕರು ಆರೋಗ್ಯ ಸಚಿವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.