ಕಲಬುರ್ಗಿ : ಅಕ್ರಮ ಮರಳುಗಾರಿಕೆ ತಡೆಯಲು ಸ್ವತಃ ಶಾಸಕ ಪ್ರಿಯಾಂಕ್ ಖರ್ಗೆ ಅವರೇ ಫೀಲ್ಡಿಗಿಳಿಯುವ ಮೂಲಕ ಅಕ್ರಮ ಚಟುವಟಿಕೆಗಳನ್ನು ತಡೆ ಹಿಡಿಯಲು ಮುಂದಾಗಿದ್ದರು.
ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿರುವ ಕುರಿತು ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಸ್ವತಃ ಶಾಸಕ ಪ್ರೀಯಾಂಕ್ ಖರ್ಗೆ ಮುಂದಾಗಿದ್ದು, ಜಿಲ್ಲೆಯ ಚಿತ್ತಾಪುರ ತಾಲೂಕಿನ ಕಾಟಮದೇವರಹಳ್ಳಿ ಬಳಿ ಕಾಗಿನ ನದಿಯಿಂದ ತೆಗೆದು ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮರಳು ಅಡ್ಡೆ ಮೇಲೆ ಶಾಸಕರು, ದಾಳಿ ನಡೆಸಿ ಮರಳನ್ನು ವಶಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೂಡಲೇ ಅಕ್ರಮ ಮರುಳು ಸಾಗಾಣಿಕೆಗೆ ಕಡಿವಾಣ ಹಾಕುವಂತೆ ತಹಶೀಲ್ದಾರ್ ಉಮಾಕಾಂತ್ ಹಳ್ಳೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಸುಮಾರು ಹತ್ತಕ್ಕೂ ಅಧಿಕ ಮರಳಿನ ಲಾರಿಗಳನ್ನು ಜಪ್ತಿ ಮಾಡಿರುವುದಾಗಿ ತಹಶೀಲ್ದಾರ್ ಉಮಾಕಾಂತ್ ಹಳ್ಳೆ ಅವರು ತಿಳಿಸಿದರು.
ಕೆಲ ದಿನಗಳ ಹಿಂದೆ ಅಕ್ರಮವಾಗಿ ಮರಳು ಸಾಗಾಣಿಕೆ ಅವಕಾಶ ನೀಡುವಂತೆ ಕರೆ ಮಾಡಿ ಅನುಮತಿ ಕೇಳಿದ ವ್ಯಕ್ತಿಯೋರ್ವನನ್ನು ಪ್ರೀಯಾಂಕ್ ಖರ್ಗೆ ದೂರವಾಣಿಯಲ್ಲೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.