ಕಲಬುರಗಿ: ಅಫಜಲಪೂರ ತಾಲೂಕಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮರಳು ದಂಧೆಯನ್ನು ಮೂರು ದಿನಗಳಲ್ಲಿ ನಿಲ್ಲಿಸದಿದ್ದರೆ ನನ್ನ 81ನೇ ಇಳಿ ವಯಸ್ಸಿನಲ್ಲಿ ಏಕಾಂಗಿಯಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಎಂ.ವೈ.ಪಾಟೀಲ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನಲ್ಲಿ ಮರಳು ಅಕ್ರಮ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಮರಳು ದಂಧೆಗೆ ಕಡಿವಾಣ ಹಾಕಲು ಬಿಜೆಪಿ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಾಸಕ ಎಂ.ವೈ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ರಾಜಾರೋಷವಾಗಿ ಮರಳು ದಂಧೆ ನಡೆಯುತ್ತಿದೆ. ವಿಶೇಷವಾಗಿ ನಮ್ಮ ತಾಲೂಕಿನಲ್ಲಿ ಸುಮಾರು 110 ಕಿ.ಮೀ. ಭೀಮಾ ನದಿ ಹರಿಯುತ್ತಿದ್ದು, ಮರಳು ದಂಧೆಕೋರರು ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಮರಳು ಸಾಗಿಸುತ್ತ ಬಂದಿದ್ದಾರೆ.
ಈ ಬಗ್ಗೆ ಪೊಲೀಸ್ ಇಲಾಖೆ, ಕಂದಾಯ, ಗಣಿ ಇಲಾಖೆಯವರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದಾರೆ ಹೊರತು ಕ್ರಮ ಕೈಗೊಳ್ಳುತ್ತಿಲ್ಲ. ಬಿಜೆಪಿ ಸರ್ಕಾರ ಅದ್ಯಾಕೆ ಮೃದು ಧೋರಣೆ ಹೊಂದಿದೆಯೋ ನಮಗೆ ತಿಳಿಯುತ್ತಿಲ್ಲ. ಇದರಿಂದ ಸ್ಥಳೀಯ ಶಾಸಕನಾದ ನನಗೆ ಜನರಿಗೆ ಉತ್ತರಿಸಲು ಮುಜುಗರವಾಗುತ್ತಿದೆ ಎಂದರು.