ಕಲಬುರಗಿ : ರಾಜ್ಯದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ಜೆಡಿಎಸ್ನಲ್ಲಿರುವ ಅಲ್ಪಸಂಖ್ಯಾತ ಮುಖಂಡರು ತೀವ್ರ ಅಸಮಾಧಾನ ಹೊರಹಾಕಿದ್ದು, ಒಬ್ಬರ ನಂತರ ಒಬ್ಬರು ಪಕ್ಷಕ್ಕೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ. ಇದೀಗ ಕಲ್ಯಾಣ ಕರ್ನಾಟಕ ಭಾಗದ ಅಲ್ಪಸಂಖ್ಯಾತರ ಮುಖಂಡರು ಸಹ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಜೆಡಿಎಸ್ ಪಕ್ಷದಲ್ಲಿ ಮುಂದುವರೆಯಬೇಕಾ? ಅಥವಾ ರಾಜೀನಾಮೆ ಕೊಟ್ಟು ಬೇರೆ ಪಕ್ಷಕ್ಕೆ ಹೋಗಬೇಕಾ? ಎನ್ನುವ ಬಗ್ಗೆ ಅಲ್ಪಸಂಖ್ಯಾತರ ಸಮಾವೇಶ ನಡೆಸಲಾಯಿತು. ಕಲಬುರಗಿ ನಗರದ ಮೆಟ್ರೋ ಫಂಕ್ಷನ್ ಹಾಲ್ನಲ್ಲಿ ಮಾಜಿ ಸಚಿವ ಎನ್ ಎಂ ನಬಿ ಹಾಗೂ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಮಾಜಿ ರಾಜ್ಯಾಧ್ಯಕ್ಷ ನಾಸೀರ್ ಹುಸೇನ್ ನೇತೃತ್ವದಲ್ಲಿ ಮುಸ್ಲಿಂ ಮುಖಂಡರು ಸಭೆ ನಡೆಸಿದರು. ಈ ವೇಳೆ ಕಲಬುರಗಿ, ಬೀದರ್, ಯಾದಗಿರಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜೆಡಿಎಸ್ನ ಅಲ್ಪಸಂಖ್ಯಾತ ಮುಖಂಡರು ಭಾಗಿಯಾಗಿ ಬಿಜೆಪಿ, ಜೆಡಿಎಸ್ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದರು.
"ಜಾತ್ಯತೀತ ಅಂತ ನಾವು ಜೆಡಿಎಸ್ ಪಕ್ಷಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಹೋರಾಟ ನಡೆಸಿ ಪಕ್ಷ ಉಳಿಸಿದ್ದೇವೆ. ಆದರೆ, ಇದೀಗ ಜೆಡಿಎಸ್ ವರಿಷ್ಠರು ಕೋಮುವಾದಿ ಬಿಜೆಪಿ ಜೊತೆ ಕೈ ಜೋಡಿಸಿ ಅಲ್ಪಸಂಖ್ಯಾತರನ್ನು ಕೈ ಬಿಟ್ಟಂತಾಗಿದೆ. ಹೀಗಾಗಿ, ಪಕ್ಷದ ನಿರ್ಣಯದ ವಿರುದ್ಧ ನಾವು ಇದ್ದೇವೆ. ಪಕ್ಷದ ಜೊತೆ ನಾವು ಹೋಗುವುದಿಲ್ಲ. ಅಕ್ಟೋಬರ್ 08 ರಂದು ಬೆಂಗಳೂರಿನಲ್ಲಿ ರಾಜ್ಯದ ಎಲ್ಲ ಅಲ್ಪಸಂಖ್ಯಾತ ಮುಖಂಡರ ಸಭೆ ನಡೆಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಮಗೆ ಇಲ್ಲಿಯವರೆಗೂ ಯಾವ ಪಕ್ಷದವರು ಕರೆದಿಲ್ಲ, ಯಾವ ಪಕ್ಷದತ್ತ ಹೋಗಬೇಕು ಎಂಬುದರ ತೀರ್ಮಾನ ಸಹ ಬೆಂಗಳೂರಿನ ಸಭೆಯಲ್ಲಿ ಮಾಡಲಾಗುವುದು" ಎಂದು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಮಾಜಿ ರಾಜ್ಯಾಧ್ಯಕ್ಷ ನಾಸಿರ್ ಹುಸೇನ್ ಉಸ್ತಾದ್ ಹೇಳಿದರು.
ಸದ್ಯಕ್ಕೆ ಲೋಕಸಭಾ ಚುನಾವಣೆ ಹಿನ್ನೆಲೆ ಪಕ್ಷದ ಶಕ್ತಿ ವೃದ್ಧಿಸಲು ದಳಪತಿಗಳು ಕಮಲದತ್ತ ಮುಖ ಮಾಡಿದ್ರೆ, ಇತ್ತ ಅವರ ಪಕ್ಷದ ಮುಸ್ಲಿಂ ಮುಖಂಡರು ಕೈನತ್ತ ಚಿತ್ತ ಹರಿಸುತ್ತಿದ್ದಾರೆ. ಹೀಗಾಗಿ, ಬಿಜೆಪಿ ಜೆಡಿಎಸ್ ಮೈತ್ರಿಯ ಪರಿಣಾಮ ಗೊತ್ತಾಗಬೇಕು ಅಂದ್ರೆ ಲೋಕಸಭೆ ಸಮರದ ಫಲಿತಾಂಶದವರೆಗೆ ಕಾಯಬೇಕಿದೆ.
ಇನ್ನು ಮೈತ್ರಿ ಬಗ್ಗೆ ಈ ಹಿಂದೆ ಅಭಿಪ್ರಾಯ ವ್ಯಕ್ತಪಡಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, "ನನಗೆ ಅಕ್ಟೋಬರ್ 16ರ ವರೆಗೆ ಅವಕಾಶ ಬೇಕು. ಅಕ್ಟೋಬರ್ 16 ರಂದು ಸಮಾನ ಮನಸ್ಕರ ಸಭೆ ಕರೆದಿದ್ದೇನೆ. ನಾನು ಜನರ ಬಳಿ ಅಭಿಪ್ರಾಯ ಪಡೆಯುವೆ. ಎಲ್ಲರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ನಮ್ಮದು ಪ್ರಾದೇಶಿಕ ಪಕ್ಷ. ನಾನು ಕುಮಾರಸ್ವಾಮಿ ಬಳಿ ಮಾತನಾಡಿಲ್ಲ. ಕುಮಾರಸ್ವಾಮಿ ನನಗೆ ಸಹೋದರ ಸಮಾನ. ದೇವೇಗೌಡರು ನನ್ನ ತಂದೆ ಸಮಾನ. ನನಗೆ ನೋವಾಗಿದೆ, ದೆಹಲಿಗೆ ಹೋಗಿದ್ರೂ ನನ್ನ ಬಳಿ ಹೇಳಿಲ್ಲ" ಎಂದಿದ್ದರು.
ಇದನ್ನೂ ಓದಿ : ನನಗೆ ನೋವಾಗಿದೆ.. ಅಕ್ಟೋಬರ್ 16ರಂದು ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ : ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ