ಕಲಬುರಗಿ: ಬಯಲು ಬಹಿರ್ದೆಸೆಗೆ ತೆರಳಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಅಮಾನವೀಯ ಕೃತ್ಯ ಜಿಲ್ಲೆಯ ಆಳಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಫಜಲಪುರ ತಾಲೂಕಿನ 15 ವರ್ಷದ ಬಾಲಕಿ ಶಾಲೆಗೆ ತೆರಳಲು ಆಳಂದ ತಾಲೂಕಿನ ಗ್ರಾಮವೊಂದರಲ್ಲಿನ ತನ್ನ ಅತ್ತೆ ಮನೆಯಲ್ಲಿದ್ದಳು. ಮಂಗಳವಾರ ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ಬಹಿರ್ದೆಸೆಗೆಂದು ಮನೆಯಿಂದ ಹೊರಹೋಗಿದ್ದ ಬಾಲಕಿ ಸುಮಾರು ಹೊತ್ತು ಕಳೆದರೂ ಬಂದಿರಲಿಲ್ಲ. ಗಾಬರಿಗೊಂಡ ಕುಟುಂಬಸ್ಥರು, ಗ್ರಾಮಸ್ಥರು ಹುಡುಕಾಟ ನಡೆದಿದಾಗ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.
ಬಾಲಕಿಯ ಮೈಮೇಲೆ ಎಳೆದಾಡಿ ತರಚಿದ ಗಾಯಗಳಾಗಿವೆ. ನಂತರ ವೇಲ್ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಲಾಗಿದೆ. ಮೇಲ್ನೋಟಕ್ಕೆ ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರವೆಸಗಿ ಕೊಲೆಗೈದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
9ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ದೀಪಾವಳಿ ರಜೆಗೆ ತನ್ನ ಸ್ವಗ್ರಾಮಕ್ಕೆ ತೆರಳಿ, ನವೆಂಬರ್ 03ರಿಂದ ಪರೀಕ್ಷೆ ಇರುವ ಕಾರಣ ನಿನ್ನೆಯಷ್ಟೆ ಮರಳಿ ಬಂದಿದ್ದಳು. ಹೀಗೆ ಬಂದವಳು ಬಯಲು ಬಹಿರ್ದೆಸೆಗೆ ಹೋದಾಗ ದುಷ್ಕರ್ಮಿಗಳು ಅಮಾನವೀಯ ಕೃತ್ಯ ನಡೆಸಿದ್ದಾರೆ.
ಸ್ಥಳಕ್ಕೆ ಕಲಬುರಗಿ ಎಸ್ಪಿ ಇಶಾ ಪಂತ್ ಇತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮದುವೆಗೆ ಇದ್ದ ವಿಘ್ನ ನಿವಾರಣೆಗೆ ಬಾಲಕಿ ಮೇಲೆ ಅತ್ಯಾಚಾರ.. ಶಿಕ್ಷಕನಿಗೆ ಮಾಂತ್ರಿಕ ನೀಡಿದ ಆ ದುಷ್ಟ ಸಲಹೆ ಏನು?