ಕಲಬುರಗಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ತನಿಖೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ. ಸದ್ಯ ಕೆಲವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ಇಶಾ ಪಂತ್ ತಿಳಿಸಿದ್ದಾರೆ.
ಈ ಬಗ್ಗೆ ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಘಟನೆ ಕುರಿತಂತೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಳಂದ ಡಿವೈಎಸ್ಪಿ, ಆಳಂದ ಸಿಪಿಐ, ಅಫಜಲಪುರ ಸಿಪಿಐ, ಆಳಂದ ಪಿಎಸ್ಐ ಅವರನ್ನೊಳಗೊಂಡ ಒಂದು ವಿಶೇಷ ತಂಡ ರಚನೆ ಮಾಡಲಾಗಿದೆ. ತನಿಖೆ ಚುರುಕುಗೊಂಡಿದ್ದು, ಸ್ಥಳಕ್ಕೆಡಾಗ್ ಸ್ಕ್ವಾಡ್ ತಂಡ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕೃತ್ಯ ಕುರಿತಂತೆ ಈಗಾಗಲೇ ಸಾಕಷ್ಟು ಮಾಹಿತಿ ಕಲೆ ಹಾಕಲಾಗಿದ್ದು, ಸಾಕ್ಷ್ಯಗಳು ಸಹ ಸಿಕ್ಕಿವೆ. ಹಲವರನ್ನು ಠಾಣೆಗೆ ಕರೆ ತಂದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಕರಣದ ವಿವರ: ಮಂಡ್ಯದಲ್ಲಿ ಟ್ಯೂಷನ್ ಶಿಕ್ಷಕನೋರ್ವ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪ್ರಕರಣ ಮಾಸುವ ಮುನ್ನವೇ ಕಲಬುರಗಿಯಲ್ಲೂ ಬಾಲಕಿಯ ರೇಪ್ & ಮರ್ಡರ್ ನಡೆದಿದೆ. ಆಳಂದ ಠಾಣೆ ವ್ಯಾಪ್ತಿಯಲ್ಲಿ 9ನೇ ತರಗತಿ ಓದುತಿದ್ದ 15 ವರ್ಷದ ಅಪ್ರಾಪ್ತ ಬಾಲಕಿ ಮಂಗಳವಾರ ಮಧ್ಯಾಹ್ನ 3-4 ಗಂಟೆ ಅಂತರದಲ್ಲಿ ಮನೆಯಿಂದ ಬಯಲಿಗೆ ಶೌಚಕ್ಕೆ ತೆರಳಿದ್ದಳು. ಆಗ ಬಾಲಕಿಯನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಕೊಲೆಗೈದು ಪರಾರಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಘಟನೆ ಖಂಡಿಸಿ ಆಳಂದ ಮತ್ತು ಕಲಬುರಗಿ ಪಟ್ಟಣದಲ್ಲಿ ಶ್ರೀರಾಮ ಸೇನೆ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಆರೋಪಿಗಳನ್ನು ಶೀಘ್ರ ಬಂಧಿಸಿ ಗಲ್ಲಿಗೇರಿಸುವಂತೆ ಪೊಲೀಸ್ ಇಲಾಖೆ ಹಾಗೂ ಸರ್ಕಾರಕ್ಕೆ ಆಗ್ರಹಿಸಿವೆ.
ಇದನ್ನೂ ಓದಿ: ಮಂಡ್ಯ: ಟ್ಯೂಷನ್ಗೆ ಕರೆದು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಮಾಡಿ ಸಂಪ್ಗೆ ಎಸೆದ ಕಿರಾತಕ