ಕಲಬುರಗಿ: ಬಳ್ಳಾರಿ ವಿಭಜನೆಗೆ ಸೋಮಶೇಖರ್ ರೆಡ್ಡಿ ಅವರು ವಿರೋಧಿಸಿ ಮಂಡಿಸಿದ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಕಲಬುರಗಿಯಲ್ಲಿ ಮಾತನಾಡಿದ ಅವರು, ಸೋಮಶೇಖರ್ ರೆಡ್ಡಿ ಬಿಜೆಪಿಯ ಹಿರಿಯ ಶಾಸಕರು. ವಿಭಜನೆಗೆ ಅವರು ವಿರೋಧಿಸಿ ಮಂಡಿಸಿದ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಮೇಲಾಗಿ ಬಳ್ಳಾರಿ ಜಿಲ್ಲೆ ಇನ್ನೂ ವಿಭಜನೆ ಹಂತಕ್ಕೆ ಬಂದಿಲ್ಲ. ಕೇವಲ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಸೋಮಶೇಖರ್ ರೆಡ್ಡಿ ನನ್ನ ಒಳ್ಳೆಯ ಸ್ನೇಹಿತರಾಗಿದ್ದಾರೆ. ಅವರೊಂದಿಗೆ ಕುಲಂಕಷವಾಗಿ ಚರ್ಚೆ ಮಾಡುವುದಾಗಿ ಸಚಿವರು ಹೇಳಿದ್ದಾರೆ.
ಶಾಲಾ ಮಕ್ಕಳಿಗೆ ಸಾಯಿ ಶ್ಯೂರ್:
ಅಪೌಷ್ಟಿಕತೆ ಹೋಗಲಾಡಿಸಲು ರಾಜ್ಯದಾದ್ಯಂತ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ಜೊತೆಗೆ ಬೆಳಗ್ಗೆ ಕ್ಷೀರಭಾಗ್ಯ ಕೂಡ ನೀಡಲಾಗುತ್ತಿದೆ. ಆದರೆ ಮಕ್ಕಳು ಹಾಲು ಕುಡಿಯುತ್ತಿಲ್ಲ. ಹೀಗಾಗಿ ಹಾರ್ಲಿಕ್ಸ್, ಬೋರ್ನ್ವಿಟಾ ಮಾದರಿಯಲ್ಲಿ ಸಾಯಿ ಶ್ಯೂರ್ ಪೌಡರ್ ಮಿಶ್ರಿತ ಹಾಲು ನೀಡಲು ಉದ್ದೇಶಿಸಲಾಗಿದೆ ಎಂದಿದ್ದಾರೆ.
ಸತ್ಯ ಸಾಯಿ ಸಂಸ್ಥೆಯವರು ಸಾಕಷ್ಟು ಅಧ್ಯಯನ ನಡೆಸಿ ಇದನ್ನು ತಯಾರಿಸಿದ್ದಾರೆ. ಇದರಲ್ಲಿ ಪೌಷ್ಟಿಕತೆ ಹಾಗೂ ಫ್ಲೇವರ್ ಕೂಡ ಮಕ್ಕಳಿಗೆ ಸಿಗಲಿದೆ. ಅದರಂತೆ ಮಧ್ಯಾಹ್ನದ ಊಟ ರಾಜ್ಯದ ಎಲ್ಲಾ ಸರ್ಕಾರಿ ಪಿಯು ಕಾಲೇಜುಗಳಿಗೂ ವಿಸ್ತರಿಸುವ ಬೇಡಿಕೆ ಬಂದಿದೆ. ಇದೊಂದು ನ್ಯಾಯಯುತವಾದ ಬೇಡಿಕೆಯಾಗಿದ್ದು, ಖರ್ಚು-ವೆಚ್ಚದ ಲೆಕ್ಕ ಹಾಕಿ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿದರು.
ದೈಹಿಕ ಶಿಕ್ಷಕರು ಹಾಗೂ ಶಿಕ್ಷಕರ ಬಾಕಿ ವೇತನ ಸೇರಿದಂತೆ ಮನವಿಗಳ ಮಹಾಪೂರವೇ ಹರಿದು ಬಂದಿವೆ. ವಿಶ್ವೇಶ್ವರಯ್ಯ ಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದ ನಂತರ ಸಚಿವರು ಮನವಿಗಳನ್ನು ಸ್ವೀಕರಿಸಲಿದ್ದಾರೆ ಎಂಬ ವಿಷಯ ತಿಳಿದ ಸಾಕಷ್ಟು ಜನರು ತಮ್ಮ ಕೈಯಲ್ಲಿ ಅರ್ಜಿಗಳನ್ನು ಹಿಡಿದುಕೊಂಡು ಆಗಮಿಸಿದ್ದರು.
ಭವನದ ಕೋಣೆಯಲ್ಲಿ ಒಬ್ಬೊಬ್ಬರಾಗಿ ಬನ್ನಿ, ಅರ್ಜಿ ಪರಿಶೀಲನೆ ನಡೆಸುತ್ತೇನೆ ಎಂದು ಸಚಿವರು ಹೇಳಿದ್ದರು. ಹೀಗಾಗಿ ನಾ ಮುಂದು ತಾ ಮುಂದು ಎಂದು ಜನರು ಮನವಿ ನೀಡಲು ಬಂದಿದ್ದರಿಂದ ಕೆಲಹೊತ್ತು ಗದ್ದಲ ಉಂಟಾಯಿತು. ಇದರಿಂದ ಎಚ್ಚೆತ್ತುಕೊಂಡ ಸಚಿವರು ಹೊರಗಡೆ ಬಂದು ಮನವಿಗಳನ್ನು ಸ್ವೀಕರಿಸಿದರು. ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿ ಅವಸರದಲ್ಲಿ ತೆರಳಿದರು.