ಕಲಬುರಗಿ: ಜಿಲ್ಲಾ ಪ್ರವಾಸದಲ್ಲಿರುವ ಆರೋಗ್ಯ ಸಚಿವ ಕೆ.ಸುಧಾಕರ್ ನಗರದ ಜಿಮ್ಸ್ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಸೋಂಕಿತರ ಚಿಕಿತ್ಸೆ ಕುರಿತು ವೀಕ್ಷಣೆ ಮಾಡಿದರು.
ಜಿಮ್ಸ್ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದ ಸಚಿವರಿಗೆ, ಡಿಸಿ ವಿ.ವಿ.ಜೋತ್ಸ್ನಾ, ಡಿಹೆಚ್ಒ ಶರಣಬಸಪ್ಪ, ಜಿಮ್ಸ್ ನಿರ್ದೇಶಕಿ ಕವಿತಾ ಪಾಟೀಲ್, ಆರೋಗ್ಯ ಇಲಾಖೆ ಅಧಿಕಾರಿಗಳು ಸಾಥ್ ನೀಡಿದರು.
ಇದೇ ವೇಳೆ ಆಸ್ಪತ್ರೆ ಮುಂದಿದ್ದ ಸೋಂಕಿತರ ಸಂಬಂಧಿಕರು ಸಚಿವರ ಮುಂದೆ ಸಮಸ್ಯೆ ತೋಡಿಕೊಳ್ಳಲು ಯತ್ನಿಸಿದರು. ಆದರೆ ಸ್ಥಳದಲ್ಲಿದ್ದ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ಇದರಿಂದ ಅಸಮಾಧಾನಗೊಂಡ ಸಂಬಂಧಿಕರು, ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಒಳಗಡೆ ಸಮರ್ಪಕವಾಗಿ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆಂದು ಆಕ್ರೋಶ ಹೊರಹಾಕಿದರು.