ಕಲಬುರಗಿ: ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಿಸಿರುವ ಟ್ರಾಮಾ ಸೆಂಟರ್ನ್ನು ಬರುವ ಅಕ್ಟೋಬರ್ನಲ್ಲಿ ಉದ್ಘಾಟಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಜಿಮ್ಸ್ಗೆ ಭೇಟಿ ನೀಡಿ ಸಂಸ್ಥೆಯ ಕಾರ್ಯ ವೈಖರಿಯನ್ನು ಪರಿಶೀಲಿಸಿದ ಬಳಿಕ ಸಭೆ ನಡೆಸಿದ ಅವರು, ಅಗತ್ಯವಾದ ಎಲ್ಲಾ ಕಾಮಗಾರಿಗೆ ಉಪಕರಣಗಳನ್ನು ತರಿಸುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅಗತ್ಯವಿರುವ ಸಿಬ್ಬಂದಿ ವಿವರಗಳನ್ನು ನಿರ್ದೇಶಕರಿಗೆ ಕಳುಹಿಸಿ ಒಪ್ಪಿಗೆ ಪಡೆದು ತ್ವರಿತವಾಗಿ ಟ್ರಾಮಾ ಸೆಂಟರ್ ಕಾರ್ಯಾರಂಭಿಸುವಂತೆ ನೋಡಿಕೊಳ್ಳಬೇಕು. ಬರುವ ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ಅದನ್ನು ಉದ್ಘಾಟಿಸಲು ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಖಾಲಿಯಿರುವ 16 ಪ್ರೊಫೆಸರ್ ಹುದ್ದೆಗಳ ಭರ್ತಿಗೆ ತಕ್ಷಣವೇ ಅಧಿಸೂಚನೆ ಹೊರಡಿಸಿ ನೇಮಕ ಪ್ರಕ್ರಿಯೆ ಮುಗಿಸಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇಮಕ ಮಾಡುವುದು ತಡ ಆಗುವುದರಿಂದ ಇಲಾಖೆ ಮೂಲಕವೇ ನೇರ ನೇಮಕ ಮಾಡಿಕೊಳ್ಳಲು ಅನುವಾಗುವಂತೆ ನೇಮಕ ನಿಯಮ ರೂಪಿಸಿ. ಇಲ್ಲವಾದಲ್ಲಿ ಬಹುತೇಕ ಎಲ್ಲ ಕಾಲೇಜುಗಳಲ್ಲಿ ನೆನೆಗುದಿಗೆ ಬಿದ್ದಿರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಆಗುವುದಿಲ್ಲ ಎಂದು ಇಲಾಖೆ ನಿರ್ದೇಶಕರಿಗೆ ಸಭೆಯಲ್ಲಿ ತಾಕೀತು ಮಾಡಿದರು.
ಹೊರಗುತ್ತಿಗೆ ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಬೇಕು. ಹಣಕಾಸು ಅಧಿಕಾರಿ ಹುದ್ದೆ ಖಾಲಿ ಬಿಡಬಾರದು ಅಥವಾ ಪ್ರಭಾರವು ಇರಬಾರದು. ಪೂರ್ಣ ಪ್ರಮಾಣದ ಅಧಿಕಾರಿ ನೇಮಕ ಮಾಡುವಂತೆ ಸೂಚನೆ ನೀಡಿದರು. ಕೋವಿಡ್ ಸಂದರ್ಭದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಹೌಸ್ ಕೀಪಿಂಗ್ ಸಿಬ್ಬಂದಿಯನ್ನು ಏಕೆ ಇಟ್ಟುಕೊಂಡಿದ್ದೀರಿ? ಸ್ಥಳೀಯರಿಗೆ ಏಕೆ ಅವಕಾಶ ನೀಡಿಲ್ಲ? ಇದರಿಂದ ಕೆಲಸ ಕಾರ್ಯಗಳಿಗೆ ತೊಂದರೆ ಆಗುವುದಿಲ್ಲವೇ ಎಂದು ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು.
ಕಪ್ಪು ಪಟ್ಟಿಯಲ್ಲಿದ್ದವರಿಗೆ ರಕ್ಷಣಾ ವ್ಯವಸ್ಥೆಯ ಗುತ್ತಿಗೆ ನೀಡಿರುವ ಆರೋಪಗಳಿವೆ. ಇದನ್ನು ಪರಿಶೀಲಿಸಿ ಹೌಸ್ ಕೀಪಿಂಗ್ ಹೊರಗುತ್ತಿಗೆಗೆ ಸಂಬಂಧಿಸಿದಂತೆ ನಿರ್ದಿಷ್ಟ ನೀತಿ ಜಾರಿಗೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಸೃಜನೆ ಮಾಡಿರುವ 61 ಸ್ಟಾಫ್ ನಸ್೯ ಹುದ್ದೆಗಳನ್ನು ಆರೋಗ್ಯ ಇಲಾಖೆಯಿಂದ ಹಸ್ತಾಂತರಿಸುವ ಸಂಬಂಧ ಕ್ರಮ ಜರುಗಿಸಲಾಗುವುದು.
ಗುಣಮಟ್ಟದ ಆರೋಗ್ಯ ಸೇವೆ ಜನರಿಗೆ ಸಿಗಬೇಕು ಎಂಬುದು ಚುನಾಯಿತ ಪ್ರತಿನಿಧಿಗಳ ಕಾಳಜಿಯಾಗಿದೆ. ಇದನ್ನು ಎಲ್ಲಾ ಸಿಬ್ಬಂದಿ ಅರ್ಥ ಮಾಡಿಕೊಳ್ಳಬೇಕು. ಆಯುಷ್ಮಾನ್ ಭಾರತ್ ಹಾಗೂ ಇತರೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡರೆ ಸಂಸ್ಥೆಯ ಸ್ವಯಂ ನಿರ್ವಹಣೆ ಸಾಧ್ಯವಿದೆ ಎಂದು ತಿಳಿಸಿದರು.