ಕಲಬುರಗಿ: ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೆಸರು ಕೇಳಿ ಬಂದಿರುವ ವಿಚಾರವಾಗಿ ಅವರ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿಂದು ಮಾತನಾಡಿದರು. ಕನ್ನಡಿಗರೊಬ್ಬರು ಪ್ರಧಾನಿಯಾಗ್ತಾರೆ ಅಂದ್ರೆ ಅದು ಹೆಮ್ಮೆಯ ವಿಚಾರ. ಹಾಗಂತ ಸುಮ್ಮನೆ ಹಗಲುಗನಸು ಕಾಣುವುದಲ್ಲ. ನಾವು ಮೊದಲು ಕಾಂಗ್ರೆಸ್ನಿಂದ 200-250 ಸ್ಥಾನಗಳನ್ನು ಗೆಲ್ಲಬೇಕು. ಮೈತ್ರಿಕೂಟದ ಜೊತೆ ಒಗ್ಗೂಡಿ ಹೆಚ್ಚಿನ ಸ್ಥಾನ ಗೆಲ್ಲಬೇಕು. ಇವೆಲ್ಲವೂ ಮುಗಿದ ಮೇಲೆ ಮುಂದಿನ ಪ್ರಶ್ನೆಗಳು ಎಂದರು.
ಈಗಾಗಲೇ ಎಐಸಿಸಿ ಅಧ್ಯಕ್ಷರು ಈ ಬಗ್ಗೆ ಮಾತನಾಡಿದ್ದಾರೆ. ಆದಷ್ಟು ಹೆಚ್ಚಿನ ಸಂಸದರನ್ನು ಆಯ್ಕೆ ಮಾಡಿ ದೆಹಲಿಗೆ ಕಳುಹಿಸುವುದು ನಮ್ಮ ಮುಂದಿರುವ ಸವಾಲು. ಬಹುಮತ ತರಲು ಏನೇನು ಮಾಡಬೇಕೋ ಮಾಡುತ್ತೇವೆ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಲೋಕಸಭೆ ಚುನಾವಣೆ ಗೆಲ್ಲಲು ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ. ಎರಡೂ ಮನೆಗೂ ಬೆಂಕಿ ಹತ್ತಿದೆ. ಬೆಳಗಾವಿಯಲ್ಲಿ ಇದನ್ನು ನೋಡಿದ್ದೇವೆ. ಇವರದ್ದು ಮನೆಯೊಂದು ಮೂರು ಬಾಗಿಲಾಗಿದೆ. ಒಂದು ಬಾಗಿಲನ್ನು ಯತ್ನಾಳ್ ಕಾಯ್ತಿದ್ದಾರೆ. ಇನ್ನೊಂದು ಬಾಗಿಲನ್ನು ಅಶೋಕ್ ಕಾಯ್ತಿದ್ದಾರೆ. ಮೂರನೇ ಬಾಗಿಲನ್ನು ವಿಜಯೇಂದ್ರ ಕಾಯ್ತಿದ್ದಾರೆ. ಎಲ್ಲಿದೆ ಇವರಲ್ಲಿ ಸಮನ್ವಯ? ಬರಗಾಲದ ಬಗ್ಗೆ ಚರ್ಚೆ ಮಾಡಿ ಎಂದರೆ ಅವರು ತೆಲಂಗಾಣ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತಾರೆ. ನಾನು ವಿರೋಧ ಪಕ್ಷದ ನಾಯಕ ಅಂತ ಒಬ್ಬರಂತಾರೆ. ಅಸಲಿ ವಿರೋಧ ಪಕ್ಷದ ನಾಯಕ ನಾನು ಅಂತ ಇನ್ನೊಬ್ಬರು ಹೇಳ್ತಾರೆ. ಮೂರಲ್ಲ ಬಿಜೆಪಿ ಅವರ ಮನೆ ನೂರು ಬಾಗಿಲಾಗಿದೆ ಎಂದು ಪ್ರಿಯಾಂಕ್ ವ್ಯಂಗ್ಯವಾಡಿದರು.
ಸಂಸತ್ ಭವನದಲ್ಲಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿ, ಜವಾಬ್ದಾರಿ ಸ್ಥಾನದಲ್ಲಿರುವ ಆಡಳಿತ ಪಕ್ಷದವರು ಬೇಜವಾಬ್ದಾರಿಯಾಗಿ ಮಾತನಾಡುವುದು ತಪ್ಪು. ಆರು ಜನರನ್ನು ಈಗಾಗಲೇ ಟೆರರಿಸ್ಟ್ ಆ್ಯಕ್ಟ್ ಅಡಿ ಬಂಧಿಸಲಾಗಿದೆ. ಪ್ರಧಾನಿಯಾಗಲಿ, ಗೃಹ ಸಚಿವರಾಗಲಿ ಸದನದಲ್ಲಿ ಇದುವರೆಗೂ ಒಂದು ಹೇಳಿಕೆ ಕೊಟ್ಟಿಲ್ಲ. ಪ್ರಶ್ನೆ ಮಾಡುತ್ತಿರುವ 141 ಎಂಪಿಗಳನ್ನು ಅಮಾನತು ಮಾಡಿದ್ದಾರೆ. ದಾಳಿ ಯಾಕಾಯ್ತು? ಎಂದು ಕೇಳಿದ್ದಕ್ಕೆ ಅಮಾನತು ಮಾಡಿರುವುದು. ಅವರ ಅಸಮರ್ಥತೆಯನ್ನು ಇದು ಎತ್ತಿ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ಆರು ಜನರನ್ನು ಬಂಧಿಸಿದ್ದಾರೆ. ಆದರೆ ಅವರಿಗೆ ಪಾಸ್ ಕೊಟ್ಟವರನ್ನು ಏಕೆ ವಿಚಾರಣೆಗೆ ಒಳಪಡಿಸಿಲ್ಲ? ಪಾಸ್ ಕೊಟ್ಟವರಿಗೆ ಏನು ಮಾಡಿದ್ದಾರೆ? ಅವರನ್ನು ವಿಚಾರಣೆಗೆ ಕರೆದು ಹೇಳಿಕೆ ತಗೊಂಡ್ರಾ? ಇನ್ನೂ ಕೆಲವರಿಗೆ ಇನ್ನೊಬ್ಬ ಬಿಜೆಪಿ ಸಂಸದರೆ ಪಾಸ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಅದೂ ಕೂಡಾ ಬಹಿರಂಗವಾಗಲಿ. ಯಾವುದೇ ಗಂಭೀರ ವಿಚಾರವಿದ್ದರೂ ಪ್ರಧಾನಿ ಮತ್ತು ಗೃಹ ಸಚಿವರು ಸ್ವಯಂ ಪ್ರೇರಿತವಾಗಿ ಹೇಳಿಕೆ ಕೊಡುತ್ತಾರೆ. ಈ ವಿಷಯದ ಬಗ್ಗೆ ಯಾಕೆ ಕೊಡುತ್ತಿಲ್ಲ ಎನ್ನುವುದಷ್ಟೇ ನನ್ನ ಪ್ರಶ್ನೆ ಎಂದು ಖರ್ಗೆ ಪ್ರಶ್ನಿಸಿದರು.
ಪ್ರತಾಪ ಸಿಂಹ ವಿಚಾರಣೆ ಅಗತ್ಯವಿಲ್ಲ ಎನ್ನುವ ಕಲಬುರಗಿ ಸಂಸದ ಡಾ.ಉಮೇಶ ಜಾಧವ್ ವಿರುದ್ಧ ಕೂಡಾ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ. ಉಮೇಶ್ ಜಾದವ್ಗೆ ಬುದ್ಧಿ ಇಲ್ಲ. ಇದು ಗಂಭೀರವಾದ ವಿಚಾರ ಎಂದು ನಿಮ್ಮ ಪ್ರಧಾನಿಯವರೇ ಹೇಳಿದ್ದಾರೆ. ಪ್ರತಾಪ್ ಸಿಂಹ ವಿಚಾರಣೆ ಅವಶ್ಯಕತೆ ಇಲ್ಲ ಅನ್ನೋರು ಇವರ್ಯಾರು? ಇನ್ನಿಬ್ಬರಿಗೂ ಬಿಜೆಪಿ ಸಂಸದರೇ ಪಾಸ್ ಕೊಟ್ಟಿದ್ದಾರಂತೆ. ಉಮೇಶ್ ಜಾಧವ್ ಅವರೇ ಕೊಟ್ಟಿದ್ದಾರೋ ಏನೋ? ಉತ್ತರ ಕೊಡಲಿ ಎಂದರು.
ಇದನ್ನೂ ಓದಿ: ಖರ್ಗೆ ಪ್ರಧಾನಿಯಾದರೆ ನನ್ನ ಸಹಮತವಿದೆ; ಪರಿಷತ್ ಸದಸ್ಯ ಹೆಚ್ ವಿಶ್ವನಾಥ್