ಕಲಬುರಗಿ: ಹೊಟ್ಟೆತುಂಬ ಊಟ ಕೊಡಲಿಲ್ಲ ಎಂಬ ಕಾರಣಕ್ಕೆ ಮಾನಸಿಕ ಅಸ್ವಸ್ಥನೋರ್ವ ವೃದ್ಧನನ್ನು ಕಟ್ಟಿಗೆಯಿಂದ ಥಳಿಸಿ, ಕೊಲೆಗೈದಿರುವ ಬೆಚ್ಚಿಬೀಳಿಸುವ ಘಟನೆ ಅಫಜಲಪೂರ ತಾಲೂಕಿನ ಗೊಬ್ಬುರ್ (ಬಿ) ಗ್ರಾಮದಲ್ಲಿ ನಡೆದಿದೆ.
ಗೊಬ್ಬುರ್ ಗ್ರಾಮದ ನಿವಾಸಿ ಸುಲೇಮಾನ್ ಪಾನವಾಲೆ (65) ಮಾನಸಿಕ ಅಸ್ವಸ್ಥನಿಂದ ಥಳಿತಕ್ಕೆ ಒಳಗಾಗಿ ಕೊಲೆಯಾಗಿರುವ ವೃದ್ಧ. ಗೊಬ್ಬುರ್ ಹೊರವಲಯದಲ್ಲಿರುವ ಜಮೀನಿನಲ್ಲಿ ಸುಲೇಮಾನ್ ಅವರು ಮರದಿಂದ ಹುಣಸೆ ಹಣ್ಣನ್ನು ಕಿತ್ತು, ಊಟಕ್ಕೆಂದು ಕುಳಿತಾಗ ಸ್ಥಳಕ್ಕಾಗಮಿಸಿದ ಮಾನಸಿಕ ಅಸ್ವಸ್ಥ ಊಟ ಕೇಳಿದ್ದಾನೆ. ಈ ವೇಳೆ ಒಂದಿಷ್ಟು ಊಟವನ್ನು ಸುಲೇಮಾನ್ ನೀಡಿದ್ದಾರೆ. ಆದ್ರೆ ಅಸ್ವಸ್ಥನು ಹೆಚ್ಚಿನ ಊಟ ಕೇಳಿದಾಗ, ಸುಲೇಮಾನ್ ಇಲ್ಲ ಅಂತ ಹೇಳಿದ್ದಾರೆ.
ಇದನ್ನೂ ಓದಿ: ಕುಡಿದ ನಶೆಯಲ್ಲಿ ಅಟ್ಟಾಡಿಸಿ ಆಟೋ ಚಾಲಕನ ಕೊಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಇದರಿಂದ ಕುಪಿತಗೊಂಡ ಮಾನಸಿಕ ಅಸ್ವಸ್ಥ ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯಿಂದ ಜೋರಾಗಿ ತೆಲೆಗೆ ಹೊಡೆದಿದ್ದಾನೆ. ತಲೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಸುಲೇಮಾನ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ಕುರಿತು ದೇವಲ್ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.