ಕಲಬುರಗಿ : ಉತ್ತರ ಕರ್ನಾಟಕ ಭಾಗದ ನಡೆದಾಡುವ ದೇವಿ ಎಂದೇ ಚಿರಪರಿಚಿತರಾಗಿದ್ದ ಮಾತೆಯನ್ನು ಕಳೆದುಕೊಂಡು ಅವರ ಭಕ್ತ ಸಮೂಹ ಕಣ್ಣೀರಿಡುತ್ತಿದೆ. ಲೋಕ ಕಲ್ಯಾಣಕ್ಕಾಗಿ ಎಲ್ಲವನ್ನೂ ತ್ಯಜಿಸಿ ವೈರಾಗ್ಯ ಜೀವನ ನಡೆಸಿದ ಅಮ್ಮನವರ ಕನಸೊಂದು ಇನ್ನೂ ಅಪೂರ್ಣವಾಗಿಯೇ ಉಳಿದಿದೆ.
ನಡೆದಾಡುವ ದೇವತೆ ಮಾತೆ ಮಾಣಿಕೇಶ್ವರಿ ಅವರು ಮಾಣಿಕ್ಯಗಿರಿಯಲ್ಲಿ ಕೋಟಿ ಲಿಂಗ ಸ್ಥಾಪನೆ ಆಸೆ ಇಟ್ಟುಕೊಂಡಿದ್ದರು. ಅವರ ಕೋಟಿಲಿಂಗ ಸ್ಥಾಪನೆಯ ಆಸೆ ಅಪೂರ್ಣವಾಗಿದೆ. ಮಾಣಿಕ್ಯಗಿರಿಯನ್ನು ತ್ಯಜ್ಯಿಸಿ ಶಿವೈಕ್ಯರಾದ ಅಮ್ಮನವರ ಆಸೆಯಂತೆ ಕೋಟಿ ಲಿಂಗದ ಕಾರ್ಯ ಶೇ.25 ಮಾತ್ರ ಪೂರ್ಣಗೊಂಡಿದ್ದು, ಉಳಿದ ಕೆಲಸ ಪೂರ್ಣಗೊಳ್ಳುವ ಮುನ್ನವೇ ಲಿಂಗೈಕ್ಯರಾಗಿದ್ದಾರೆ.
ಮಠದ ಆವರಣದಲ್ಲಿ ಸ್ಥಾಪಿಸಲಾಗುತ್ತಿರುವ ಶಿವಲಿಂಗದ ಕಾರ್ಯ ಹಾಗೆಯೇ ಉಳಿದಿದ್ದು ಅಮ್ಮನವರ ಅಂತಿಮ ಇಚ್ಛೆಯನ್ನು ಪೂರ್ಣಗೊಳಿಸುವುದಾಗಿ ಟ್ರಸ್ಟ್ ಸದಸ್ಯರು ತಿಳಿಸಿದ್ದಾರೆ. ಅಮ್ಮನವರ ಅಪೇಕ್ಷೆಯಂತೆ ಕೋಟಿ ಲಿಂಗಗಳ ಸ್ಥಾಪನೆ ಮಾಡುತ್ತೇವೆ ಎಂದು ಮಾಣಿಕೇಶ್ವರಿ ಟ್ರಸ್ಟ್ ಸದಸ್ಯ ಮೌಲಾಲಿ ಅನಪೂರ ತಿಳಿಸಿದ್ದಾರೆ.