ಕಲಬುರಗಿ: ಕರ್ನಾಟಕದ ಸಿಂಘಂ ಎಂದೆ ಹೆಸರು ಮಾಡಿದ್ದ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಕಳ್ಳನ ಗುಂಡೇಟಿಗೆ ಹುತಾತ್ಮವಾದ ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡಿತ್ತು. ಪಿಎಸ್ಐ ಹುತಾತ್ಮ ಬೆನ್ನಲ್ಲೆ ಬಂಡೆ ಅವರ ಇಬ್ಬರು ಮಕ್ಕಳ ಸಂಪೂರ್ಣ ಶಿಕ್ಷಣ ಜವಾಬ್ದಾರಿ ಮತ್ತು ಬಂಡೆ ಸರ್ವಿಸ್ ಅವಧಿವರೆಗೂ ಸಂಬಳ ಕೊಡುವುದಾಗಿ ರಾಜ್ಯ ಸರ್ಕಾರ ಆದೇಶ ಮಾಡಿತು.
ಆದ್ರೀಗ ಸರ್ಕಾರ ಕೊಟ್ಟ ಮಾತು ತಪ್ಪಿದ್ದು, ಪಿಎಸ್ಐ ಬಂಡೆ ಫ್ಯಾಮಿಲಿ ಸಂಬಳ, ಮಕ್ಕಳ ಫೀಸ್ ಗಾಗಿ ಪರದಾಡುತ್ತಿದ್ದು, ನ್ಯಾಯಕ್ಕಾಗಿ ಎಸ್ಪಿ ಕಚೇರಿ ಎದುರು ಧರಣಿಗೆ ಮುಂದಾಗ್ತಿದೆ. ಖಡಕ್ ಆಫೀಸರ್, ಸಿಂಘಂ ಎಂದೆ ಹೆಸರು ಮಾಡಿದ್ದ ಕಲಬುರಗಿಯ ಪಿಎಸ್ ಐ ಮಲ್ಲಿಕಾರ್ಜುನ ಬಂಡೆ ಕಳ್ಳನ ಗುಂಡೇಟಿಗೆ ಹುತಾತ್ಮರಾಗಿದ್ದರು.
ಮಲ್ಲಿಕಾರ್ಜುನ ಬಂಡೆ ಹುತಾತ್ಮ ಆದಾಗ ರಾಜ್ಯ ಸರ್ಕಾರ ಮಲ್ಲಿಕಾರ್ಜುನ ಬಂಡೆ ಕುಟುಂಬಕ್ಕೆ ಧನ ಸಹಾಯ, ಒಂದು ಪ್ಲಾಟ್ ಜೊತೆಗೆ ಅವರ ಇಬ್ಬರು ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿತ್ತು. ಅಲ್ಲದೆ ಬಂಡೆ ಅವರ ಸೇವಾವಧಿ ಪೂರ್ಣ ಸಂಬಳ ಪ್ರತಿ ತಿಂಗಳು ನೀಡೊದಾಗಿ ಆದೇಶ ಕೂಡ ಮಾಡಿತ್ತು. ಅದರಂತೆ ಧನ ಸಹಾಯ, ಒಂದೂ ಸೈಟ್ ನೀಡಿದೆ. ಅಲ್ಲದೆ 2019 ಅಕ್ಟೋಬರ್ ವರೆಗೆ ಸಂಬಳ ಮತ್ತು ಮಕ್ಕಳ ಫೀ ಕೊಡುತ್ತಾ ಬಂದಿದೆ. ಆದ್ರೀಗ ಸರ್ಕಾರ ಕೊಟ್ಟ ಮಾತು ತಪ್ಪಿರೋ ಸಂಶಯ ವ್ಯಕ್ತವಾಗ್ತಿದೆ.
ಕಳೆದ ನಾಲ್ಕು ವರ್ಷಗಳಿಂದ ಅಂದ್ರೆ ಅಕ್ಟೊಬರ್ 2019 ರಿಂದ ಸರ್ಕಾರ ಬಂಡೆ ಅವರ ಪ್ರತಿ ತಿಂಗಳ ಸಂಬಳ ಹಾಗೂ ಮಕ್ಕಳ ಶಿಕ್ಷಣದ ಶುಲ್ಕ ಕೂಡ ಕೊಟ್ಟಿಲ್ಲವಂತೆ. ಹೀಗಾಗಿ ಖಾಸಗಿ ಸ್ಕೂಲ್ನಲ್ಲಿ ವಿದ್ಯಾಭ್ಯಾಸ ಮಾಡ್ತಿರೋ ಬಂಡೆ ಮಕ್ಕಳಾದ ಅವರ 5ನೇ ತರಗತಿಯಲ್ಲಿ ಓದುತ್ತಿರೋ ಪುತ್ರ ಸಾಯಿದರ್ಶನ ಮತ್ತು 10 ನೇ ತರಗತಿಯಲ್ಲಿ ಓದುತ್ತಿರೋ ಪುತ್ರಿ ಶಿವಾನಿ ಸಮಸ್ಯೆ ಎದುರಿಸುವಂತಾಗಿದೆ.
ಇನ್ನು ಪಿಎಸ್ಐ ಮಲ್ಲಿಕಾರ್ಜುನ ಬಂಡೆ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಖ್ಯಾತ ಕಳ್ಳ ಮುನ್ನಾನನ್ನು ಬಂಧಿಸಲು ತೆರಳಿದ್ದಾಗ ಗುಂಡಿನ ಕಾಳಗ ನಡೆದಿತ್ತು. ಘಟನೆಯಲ್ಲಿ ಪಿಎಸ್ ಐ ಮಲ್ಲಿಕಾರ್ಜುನ ಬಂಡೆ ತಲೆಗೆ ಗುಂಡು ಹೊಕ್ಕು ತೀವ್ರ ಗಾಯಗೊಂಡಿದ್ದರು. ಕಲಬುರಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೈದರಾಬಾದ್ ನ ಯಶೋಧಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಲ್ಲಿಕಾರ್ಜುನ ಬಂಡೆ ಯಶೋಧಾ ಆಸ್ಪತ್ರೆಯಲ್ಲಿ 15-1-2014 ರಂದು ಹುತಾತ್ಮರಾಗಿದ್ದರು.
ಗುಂಡಿನ ಕಾಳಗದಲ್ಲಿ ಬಂಡೆ ಹುತಾತ್ಮ ಪ್ರಕರಣ ಇಡೀ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಅಂದು ಇಡೀ ಕಲಬುರಗಿ ಜನ ಮತ್ತು ಸರ್ಕಾರ ಬಂಡೆ ಫ್ಯಾಮಿಲಿ ಜೊತೆಗೆ ನಿಂತಿತ್ತು. ಖುದ್ದು ಅಂದಿನ ಗೃಹ ಮಂತ್ರಿಗಳೇ ಬಂಡೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ, ಕುಟುಂಬಸ್ಥರಿಗೆ ಭರವಸೆ ನೀಡಿದ್ರು. ಕೊಟ್ಟ ಮಾತಿನಂತೆ ಸರ್ಕಾರ ಕಳೆದ ಅಕ್ಟೋಬರ್ 2019 ರ ವರೆಗೆ ನಡೆದು ಕೊಂಡಿದೆ.
ಆದ್ರೀಗ ನಾಲ್ಕು ವರ್ಷಗಳಿಂದ ಸಂಬಳ, ಮಕ್ಕಳ ಫೀಸ್ ಕೊಡದೆ ನುಣುಚಿಕೊಳ್ಳುತ್ತಿದೆ. ಶಾಲಾ ಶುಲ್ಕ ಮತ್ತು ಸಂಬಳಕ್ಕಾಗಿ ಮಕ್ಕಳ ಪೋಷಕರು ಎಸ್ ಪಿ , DGP, ಕಚೇರಿ ಸೇರಿದಂತೆ ಸಿಎಂ ಬೊಮ್ಮಾಯಿ ಅವರಿಗೂ ಭೇಟಿ ಮಾಡಿ, ಸಮಸ್ಯೆ ಹೇಳಿಕೊಡಿದ್ದಾರೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲವಂತೆ. ಕಚೇರಿಗಳಿಗೆ ಅಲೆದಲೆದು ಸುಳ್ಳು ಆಶ್ವಾಸನೆಗಳಿಂದ ರೋಸಿಹೋಗಿರೋ ಮಕ್ಕಳ ಪೋಷಕರು ಸರ್ಕಾರಕ್ಕೆ ಹತ್ತು ದಿನಗಳ ಗಡುವು ನೀಡಿದ್ದಾರೆ. ಒಂದು ವೇಳೆ ಮಕ್ಕಳ ಸ್ಕೂಲ್ ಫೀ ಮತ್ತು ಸಂಬಳ ಸಮಸ್ಯೆ ಬಗೆ ಹರಿಯದಿದ್ರೆ ಮಕ್ಕಳ ಜೊತೆಗೆ ಎಸ್ ಪಿ ಕಚೇರಿ ಎದುರು ನ್ಯಾಯಕ್ಕಾಗಿ ಧರಣಿ ಕುಡೋದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸದ್ಯ ಕೊಟ್ಟ ಮಾತು ಸರ್ಕಾರ ತಪ್ಪಿದಂತಾಗಿದ್ದು, ಹುತಾತ್ಮ ಪಿಎಸ್ ಐ ಮಲ್ಲಿಕಾರ್ಜುನ ಬಂಡೆ ಮಕ್ಕಳು, ಪೋಷಕರು ಸಮಸ್ಯೆಯಲ್ಲಿ ಸಿಕ್ಕು ಒದ್ದಾಡುವಂತಾಗಿದೆ. ಈಗಲಾದ್ರು ಸರ್ಕಾರ ಕೊಟ್ಟ ಮಾತಿನಂತೆ ಹುತಾತ್ಮ ಪಿಎಸ್ ಐ ಬಂಡೆ ಫ್ಯಾಮಿಲಿಯತ್ತ ಗಮನ ಹರಿಸಿ, ಆಗಿರೋ ಸಮಸ್ಯೆ ಪರಿಹಾರ ಮಾಡಬೇಕಿದೆ.
ಇದನ್ನೂಓದಿ:ಟ್ರೇಡ್ ಲೈಸೆನ್ಸ್ ನವೀಕರಣಕ್ಕಾಗಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಹೆಲ್ತ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ