ಕಲಬುರಗಿ: ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಲವು ಸಮುದಾಯಗಳ ಪ್ರತಿಭಟನೆಯ ಬಿಸಿ ತಟ್ಟಿದೆ. ಓರ್ವ ವ್ಯಕ್ತಿ ಸಿಎಂ ಕಾರ್ ಒಳಗೆ ಮನವಿ ಪತ್ರ ಎಸೆದು ತಮ್ಮ ಬೇಡಿಕೆ ಈಡೇರಿಸಲು ಮನವಿ ಮಾಡಿ ಆಶ್ಚರ್ಯ ಮೂಡಿಸಿದರು.
ಸಿಎಂ ಬೊಮ್ಮಾಯಿ ಕಲಬುರಗಿಗೆ ಆಗಮಿಸಿ ನೇರವಾಗಿ ಎಸ್.ವಿ.ಪಿ ವೃತ್ತಕ್ಕೆ ತೆರಳಿ ಸರ್ಧಾರ್ ವಲ್ಲಭ ಭಾಯ್ ಪಟೇಲ್‌ರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಕೆಲ ಸಮುದಾಯದವರು ಮನವಿ ಪತ್ರ ನೀಡಲು ಮುಂದೆ ಬಂದಾಗ ಪೊಲೀಸರು ತಡೆದರು. ಡಿಎಆರ್ ಮೈದಾನದಲ್ಲಿ ಮನವಿ ಪತ್ರ ಸ್ವೀಕಾರ ಕಾರ್ಯಕ್ರಮ ಇದೆ, ಅಲ್ಲಿಗೆ ಬನ್ನಿ ಎಂದು ಪೊಲೀಸರು ಹೇಳಿದರು.
ಪೊಲೀಸರ ಮಾತಿಗೆ ಕಿವಿಗೊಡದ ವ್ಯಕ್ತಿಯೋರ್ವ ಸಿಎಂ ತೆರಳುವಾಗ ಅವರ ಕಾರಿನೊಳಗೆ ಮನವಿ ಪತ್ರ ಎಸೆದರು. ಇದರಿಂದ ಒಂದು ಕ್ಷಣ ಪೊಲೀಸರು ತಬ್ಬಿಬ್ಬಾದರು. ಸಿಎಂ ಕಾರ್ನೊಳಗೆ ಮನವಿ ಪತ್ರ ಎಸೆದ ವ್ಯಕ್ತಿ ಕೋಲಿ ಸಮುದಾಯದ ಮುಖಂಡ ಎಂದು ತಿಳಿದುಬಂದಿದೆ. ಕೋಲಿ ಸಮುದಾಯವನ್ನು ಎಸ್ಟಿಗೆ ಸೇರಿಸುವಂತೆ ಆಗ್ರಹಿಸಲಾಗಿದೆ.
ಇದಕ್ಕೂ ಮುಂಚೆ ತಳವಾರ ಸಮುದಾಯದ ಯುವಕರು ಸಿಎಂ ಅವರಿಗೆ ಕಪ್ಪುಪಟ್ಟಿ ಪ್ರದರ್ಶನ ಮಾಡಿದರು. ತಳವಾರ ಸಮುದಾಯ ಈಗಾಗಲೇ ಎಸ್ಟಿ ಸಮುದಾಯಕ್ಕೆ ಸೇರಿಸಲಾಗಿದೆ. ಆದ್ರೆ ಪ್ರಮಾಣಪತ್ರ ನೀಡದೇ ವಂಚಿಸಲಾಗುತ್ತಿದೆ ಎಂದು ಆಕ್ರೋಶ ಭರಿತರಾದ ಸಮುದಾಯದ ಯುವಕರು ಕಪ್ಪುಪಟ್ಟಿ ಪ್ರದರ್ಶನ ಮಾಡಿದ್ದಾರೆಂದು ತಿಳಿದುಬಂದಿದೆ. ಸ್ಥಳದಲ್ಲಿದ್ದ ಪೊಲೀಸರು ಸುಮಾರು 15 ಜನರನ್ನು ವಶಕ್ಕೆ ಪಡೆದು ಸ್ಥಳಾಂತರಗೊಳಿಸಿದರು.
ಇದನ್ನೂ ಓದಿ: ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು.. ಮಗನನ್ನು ಬಚ್ಚಿಟ್ಟ ತಂದೆಯಿಂದ ಶಾಲೆಯಲ್ಲಿ ಹೈಡ್ರಾಮ!
ಇನ್ನು, ಹಲವು ಸಮುದಾಯಗಳು, ಸಂಘಟನೆಗಳು ಸಿಎಂಗೆ ಪ್ರತಿಭಟನೆ ಬಿಸಿ ಮುಟ್ಟಿಸಲು ಚಿಂತಿಸಿದ್ದರು. ಆದರೆ ಪೊಲೀಸರು ಅವರನ್ನು ತಡೆದಿದ್ದಾರೆ. ಈ ನಡುವೆಯೂ ಮನವಿ ಪತ್ರ ಎಸೆದ ಘಟನೆ ನಡೆದಿದೆ.