ಕಲಬುರಗಿ: ಆತ ತಾನಾಯಿತು ತನ್ನ ಕೆಲಸವಾಯ್ತು ಅಂತಾ ಟೆಂಟ್ ಹೌಸ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ. ಇಬ್ಬರು ಪತ್ನಿಯರನ್ನು ಹೊಂದಿದ್ದ ಆತ ಮೊದಲನೆಯವಳನ್ನ ಬಿಟ್ಟು 2ನೇ ಪತ್ನಿ ಜೊತೆ ವಾಸ ಮಾಡುತ್ತಿದ್ದ. ಆದರೆ 2ನೇ ಹೆಂಡತಿಯ ಸಹೋದರರಿಗೆ ಕೊಟ್ಟ ಹಣ ವಾಪಸ್ ಕೇಳಿದ್ದ. ಇಷ್ಟೇ ನೋಡಿ ದಸರಾ ಹಬ್ಬದ ನಿಮಿತ್ತ ಭಾವನಿಗೆ ಬನ್ನಿ ಕೊಡುವ ನೆಪದಲ್ಲಿ ಬಂದಿದ್ದ ಭಾಮೈದರು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಲಕ್ಷ್ಮೀಪುತ್ರ (35) ಹತ್ಯೆಗೀಡಾದ ವ್ಯಕ್ತಿ. ಕಲಬುರಗಿ ನಗರದ ಸಂತೋಷ ಕಾಲೋನಿ ನಿವಾಸಿಯಾಗಿರುವ ಲಕ್ಷ್ಮೀಪುತ್ರ ಇಬ್ಬರು ಪತ್ನಿಯರನ್ನ ಹೊಂದಿದ್ದರು. ಮೊದಲನೇ ಪತ್ನಿ ಶಶಿಕಲಾಳನ್ನ ಬಿಟ್ಟು ಎರಡನೇ ಪತ್ನಿ ಪ್ರೀತಿ ಜೊತೆ ವಾಸವಿದ್ದರು. ಲಕ್ಷ್ಮೀಪುತ್ರ ಜೀವನೋಪಾಯಕ್ಕಾಗಿ ಸಂತೋಷ ಕಾಲೋನಿಯಲ್ಲಿ ಟೆಂಟ್ ಹೌಸ್ ನಡೆಸಿಕೊಂಡು ಹೋಗುತ್ತಿದ್ದರು. ಈ ನಡುವೆ ಎರಡನೇ ಪತ್ನಿ ಸಹೋದರರಾದ ಶಿವಕಾಂತ್ ಮತ್ತು ಪ್ರಶಾಂತ್ನಿಗೆ 8 ಲಕ್ಷ ಹಣವನ್ನ ಸಾಲ ನೀಡಿದ್ದರು. ಕೆಲ ದಿನಗಳ ನಂತರ ಸಾಲ ವಾಪಾಸ್ ಕೇಳಿದ್ದಕ್ಕೆ ಕೊಡ್ತಿನಿ ಕೊಡ್ತಿನಿ ಅಂತಾ ದಿನ ದೂಡುತ್ತ ಬಂದಿದ್ದರು.
ಬನ್ನಿಕೊಟ್ಟು ಕಾಲು ಬೀಳುವ ನೆಪದಲ್ಲಿ ಹಲ್ಲೆ: ಅ.2 ರಂದು ಹಣ ಕೊಡ್ತಿವಿ ಅಂತಾ ಶಿವಕಾಂತ್ ಮತ್ತು ಪ್ರಶಾಂತ್ ಒಪ್ಪಿಕೊಂಡಿದ್ದರು. ಆದರೆ ಹಣ ಹೊಂದಿಸಲು ಸಾಧ್ಯವಾಗದಿದ್ದಾಗ ಭಾವನ ಕಥೆ ಮುಗಿಸಲು ಸ್ಕೆಚ್ ಹಾಕಿದ್ದರು. ದಸರಾ ಹಬ್ಬದ ನಿಮ್ಮಿತ್ತ ಭಾವನಿಗೆ ಬನ್ನಿ ಕೊಡಲು ಅಂತಾ ಇಬ್ಬರು ನಗರದ ಯಶವಂತ ನಗರದಲ್ಲಿರುವ ಮನೆಗೆ ಬಂದಿದ್ದಾರೆ. ಬನ್ನಿ ಕೊಟ್ಟು ಕಾಲು ಬೀಳುವ ನೆಪದಲ್ಲಿ ಜೊತೆಯಲ್ಲಿ ತಂದಿದ್ದ ಮಾರಕಾಸ್ತ್ರಗಳಿಂದ ಭಾವ ಲಕ್ಷ್ಮೀಪುತ್ರನನ್ನ ಮನಬಂದಂತೆ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ಸಹೋದರಿ ಎದುರಲ್ಲೇ ಭಾವನ ಕೊಲೆ: ಕೊಲೆ ಸಂದರ್ಭದಲ್ಲಿ ತಮ್ಮ ಸಹೋದರಿ ಪ್ರೀತಿ ಮನೆಯಲ್ಲಿಯೇ ಇದ್ದರು. ಆದರೂ ಲೆಕ್ಕಿಸದೆ ಆಕೆಯ ಎದುರು ಕೊಲೆ ಮಾಡಿ ಪರಾರಿಯಾದರು. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಕತೆ ಮುಗಿದಿತ್ತು. ಹುಚ್ಚಿಯಂತೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಂಡನ ಪಕ್ಕದಲ್ಲಿ ಕುಳಿತು ಕಣ್ಣೀರು ಹಾಕುತ್ತ ಸಹೋದರರ ವಿರುದ್ಧ ಹಿಡಿ ಶಾಪ ಹಾಕಿದರು.
ಇಬ್ಬರ ಕುಂಕುಮ ಅಳಿಸಿದ ಪಾಪಿಗಳು: ಲಕ್ಷ್ಮೀಪುತ್ರನಿಗೆ ಶಶಿಕಲಾ ಮತ್ತು ಪ್ರೀತಿ ಇಬ್ಬರು ಪತ್ನಿಯರು. ಮೊದಲ ಪತ್ನಿ ಶಶಿಕಲಾಳಿಗೆ ಮೂವರು ಮಕ್ಕಳಿದ್ದರು. ಕೆಲ ವರ್ಷಗಳ ಹಿಂದೆ ಶಶಿಕಲಾಳನ್ನ ಬಿಟ್ಟು ಪ್ರೀತಿ ಎಂಬಾಕೆ ಜೊತೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಪ್ರೀತಿಯನ್ನು ಕಲಬುರಗಿಯಲ್ಲಿ ಶಶಿಕಲಾಳನ್ನು ತನ್ನ ಊರಿನಲ್ಲಿ ಇರಿಸಿದ್ದರು. ಇದರ ಮಧ್ಯೆ ಕಳೆದ ಎರಡು ದಿನಗಳ ಹಿಂದೆ ದಸರಾ ಹಬ್ಬದ ನಿಮಿತ್ತ ಮೊದಲ ಪತ್ನಿ ಶಶಿಕಲಾಳ ಮಕ್ಕಳಿಗೆ ಬಟ್ಟೆ ಕೊಡಿಸಲು ಮನೆಗೆ ಹೋಗಿದ್ದರು. ಇಬ್ಬರು ಪತ್ನಿ ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದರು. ಟೆಂಟ್‌ಹೌಸ್ ನಡೆಸಿಕೊಂಡು ಲಕ್ಷಾಂತರ ರೂಪಾಯಿ ಹಣ ಸಂಪಾದಿಸುತ್ತಿದ್ದ ಲಕ್ಷ್ಮೀಪುತ್ರ, ಹೆಂಡತಿಯ ಸಹೋದರರಿಗೆ ಹಣಕಾಸಿನ ಅವಶ್ಯಕತೆ ಇದ್ದ ಕಾರಣ 8 ಲಕ್ಷ ಹಣ ನೀಡಿದ್ದರು.
ಆದರೆ ಹಣ ವಾಪಾಸ್ ಕೇಳಿದಾಗ ಕಾಲಹರಣ ಮಾಡಿ ದಿನ ನೂಕುತ್ತಿದ್ದರು. ಹಣ ಹೊಂದಿಸಲಾಗದೇ ಒದ್ದಾಡುತ್ತಿದ್ದ ಶಿವಕಾಂತ್ ಮತ್ತು ಪ್ರಶಾಂತ್ ಸೇರಿಕೊಂಡು ಭಾವನಿಗೆ ಚಟ್ಟ ಕಟ್ಟಲು ಮುಹೂರ್ತ ಫಿಕ್ಸ್ ಮಾಡಿದ್ದರು. ಅದರಂತೆ ದಸರಾ ಹಬ್ಬದ ನೆಪದಲ್ಲಿ ಬನ್ನಿ ಕೊಡಲು ಮನೆಗೆ ಹೋಗಿ ಅಂದುಕೊಂಡಂತೆ ಭಾವನಿಗೆ ಸಹೋದರಿಯ ಎದುರೇ ಕೊಚ್ಚಿ ಕೊಂದಿದ್ದಾರೆ.
ಇಬ್ಬರು ಆರೋಪಿಗಳ ಬಂಧನ: ಕೊಲೆ ಪ್ರಕರಣ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ದಸರಾ ಹಬ್ಬದ ಸಡಗರ ಸಂಭ್ರಮದಲ್ಲಿದ್ದ ಲಕ್ಷ್ಮೀಪುತ್ರ ತನ್ನ ಭಾಮೈದರಿಂದಲೇ ಭೀಕರವಾಗಿ ಹತ್ಯೆಯಾಗುತ್ತೇನೆಂದು ಊಹಿಸಿರಲಿಲ್ಲ. ಹಣಕಾಸಿನ ವಿಚಾರಕ್ಕೆ ಇಬ್ಬರು ಪತ್ನಿಯರು ವಿಧವೆಯರಾಗಿದ್ದು, ಮಕ್ಕಳು ಅನಾಥರಾಗಿದ್ದು ಮಾತ್ರ ದುರಂತವೆ ಸರಿ.
ಇದನ್ನೂ ಓದಿ: ಕಲಬುರಗಿಯಲ್ಲಿ ಹರಿದ ನೆತ್ತರು.. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಯುವಕನ ಬರ್ಬರ ಕೊಲೆ