ಕಲಬುರಗಿ: ಮಧ್ಯಪ್ರದೇಶದಲ್ಲಿ ಐಟಿ ದಾಳಿ ನಡೆದಿರುವ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ, ಐಟಿ, ಇಡಿ, ಸಿಬಿಐ ಸೇರಿದಂತೆ ಸ್ವಾಯತ್ತ ಸಂಸ್ಥೆಗಳೆಲ್ಲವನ್ನೂ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ನಾಯಕರ ಮನೆಗಳು ಮಾತ್ರ ಇವರಿಗೆ ಕಾಣುತ್ತಿವೆ. ಬಿಜೆಪಿಯಲ್ಲಿಯೂ ದೊಡ್ಡ ದೊಡ್ಡ ಉದ್ಯಮಿಗಳು, ಹಣವಂತರು ಇದ್ದಾರೆ. ಯಾಕೆ ಐಟಿ ದಾಳಿ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದ ಖರ್ಗೆ, ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುವ ಮೂಲಕ ಬಿಜೆಪಿ ಕೆಟ್ಟ ಸಂಸ್ಕೃತಿಗೆ ನಾಂದಿ ಹಾಡಿದೆ ಎಂದು ಕಿಡಿಕಾರಿದರು.
ಇನ್ನು ಬಿಜೆಪಿ ಪ್ರಣಾಳಿಕೆ ವಿಚಾರವಾಗಿ ಮಾತನಾಡಿದ ಅವರು, ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಜನರನ್ನು ಕೆರಳಿಸಲು ಬಿಜೆಪಿ ಯತ್ನಿಸುತ್ತಿದೆ. ರಾಮ ಮಂದಿರ ನಿರ್ಮಾಣ, ಶಬರಿಮಲೆ ಮಹಿಳೆಯರ ಪ್ರವೇಶ ವಿಚಾರ, ಕಾಶ್ಮೀರದ 370 ನೇ ವಿಧಿ ರದ್ದು ಇಂತಹ ಭಾವನಾತ್ಮಕ ವಿಚಾರಗಳೇ ಬಿಜೆಪಿಯ ಪ್ರಣಾಳಿಕೆಯಲ್ಲಿ ಸೇರಿವೆ ಎಂದು ಟೀಕಿಸಿದರು.
ಭಾವನಾತ್ಮಕವಾಗಿ ಜನರನ್ನು ಕೆರಳಿಸಿ ಮತ ಪಡೆಯಲು ಸಾಧ್ಯವಿಲ್ಲ. ರಾಮ ಮಂದಿರ ಬಿಜೆಪಿಯ ಕಾಯಂ ಇಶ್ಯೂ ಆಗಿದೆ. ಪ್ರತಿ ಚುನಾವಣೆಯಲ್ಲಿಯೂ ಇದನ್ನೇ ಹೇಳುತ್ತಾರೆ. ಇದರಲ್ಲಿ ದಮ್ ಇಲ್ಲ. ರಾಮ ಮಂದಿರಕ್ಕಾಗಿ ರಥಯಾತ್ರೆ ಮಾಡಿದ ಅಡ್ವಾಣಿಗೇ ಮೂಲೆಗುಂಪು ಮಾಡಿದ್ದಾರೆ. ಮುಂದೆಯೂ ಇದೇ ರೀತಿ ಮಾಡಿಕೊಂಡು ಹೋದ್ರೆ ಇವರೂ ಮೂಲೆಗುಂಪಾಗ್ತಾರೆ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಗೆ ಎಚ್ಚರಿಕೆ ನೀಡಿದರು.
ನಮ್ಮ ನ್ಯಾಯಬದ್ಧ ಯೋಜನೆಗಳಿಗೆ ಪ್ರತಿ ಯೋಜನೆ ಕೊಡಲಾಗದೇ ಬಿಜೆಪಿ ತತ್ತರಿಸಿದೆ. ಬಿಜೆಪಿಯವರು ರೈತರಿಗೆ ವರ್ಷಕ್ಕೆ ಆರು ಸಾವಿರ ಕೊಡುವುದಾಗಿ ಹೇಳಿದ್ರೆ, ನಮ್ಮದು ಬಡವರಿಗೆ ತಿಂಗಳಿಗೆ ಆರು ಸಾವಿರ ರೂ. ಇದೆ ಎಂದು ಖರ್ಗೆ ಹೇಳಿದರು.