ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿ, ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ರೋಡ್ ಶೋ ನಡೆಸಿದರು.
ನಗರೇಶ್ವರ ಶಾಲೆಯಿಂದ ಆರಂಭಗೊಂಡ ರೋಡ್ ಶೋನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ರಾಜ್ಯಸಭಾ ಸದಸ್ಯ ಕೆ ಬಿ ಶರಣಪ್ಪಾ, ಸಚಿವರಾದ ರಾಜಶೇಖರ ಪಾಟೀಲ್, ಪ್ರಿಯಾಂಕ್ ಖರ್ಗೆ, ರಹಿಂ ಖಾನ್, ಶಾಸಕರಾದ ಎಂ ವೈ ಪಾಟೀಲ್, ಅಜಯ್ ಸಿಂಗ್, ಖನೀಸ್ ಫಾತಿಮಾ ಬೇಗಂ, ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ನಗರೇಶ್ವರ ಶಾಲೆಯಿಂದ ಆಗಮಿಸಿದ ರೋಡ್ ಶೋ ಜಗತ್ ವೃತ್ತದಲ್ಲಿ ಬಹಿರಂಗ ಸಭೆಯಾಗಿ ಮಾರ್ಪಟ್ಟಿತು. ಇದೆ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ನಾನು ಮಾಡಿದ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇನೆ. ಕೆಲಸ ಮಾಡಿದ್ದಕ್ಕೆ ಮತ ಹಾಕಿ ಎಂದು ಮನವಿ ಮಾಡುತ್ತಿದ್ದೇನೆ. ಆದರೆ ಬಿಜೆಪಿ ಯಾವುದೇ ಕೆಲಸ ಮಾಡದೆ ಮತ ಕೇಳುತ್ತಿದೆ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿಯ ಬಗ್ಗೆ ನಿರ್ಲಕ್ಷ್ಯ ಮಾಡಿದ ಬಿಜೆಪಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು.
ನಾವು ಸಂವಿಧಾನಕ್ಕೆ ತಿದ್ದುಪಡಿತಂದು ಹಿಂದುಳಿದ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿ ಕೊಟ್ಟಿದ್ದೇವೆ. ಆದರೆ ಈಗ ಬಿಜೆಪಿ ಅವರು ತಮ್ಮದು ಪಾಲಿದೆ ಎಂದು ಹೇಳುತ್ತಿದ್ದಾರೆ. ಮೈನತ್ ಖರೇ ಮುರಗಿ ಸಾಬ್, ಅಂಡಾ ಖಾಯೇ ಫಕೀರ್ ಸಾಬ್ ಎಂಬಂತಾಗಿದೆ ಎಂದು ಬಿಜೆಪಿ ನಾಯಕರ ಕಾರ್ಯವೈಖರಿಯನ್ನು ಖರ್ಗೆ ಲೇವಡಿ ಮಾಡಿದರು.