ಕಲಬುರಗಿ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಚಿಂಚೋಳಿ ಶಾಸಕ ಉಮೇಶ ಜಾಧವ ಕಲಬುರಗಿ ಲೋಕಸಭೆ ಚುನಾವಣೆಗೆ ಬರ್ಜರಿ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಮುಂಬೈನಲ್ಲಿರುವ ಕ್ಷೇತ್ರದ ಜನರ ಮನ ಓಲೈಸಿದ್ದು, ಒಂದೊಂದು ಮತ ಕೂಡ ನಮಗೆ ಅಮುಲ್ಯವಾದದ್ದು ಅಂತ ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಜಾಧವ ಕಣಕ್ಕೆ ಇಳಿಯುವದು ಬಹುತೇಕ ಖಚಿತವಾಗಿದೆ. ಹೀಗಾಗಿ ಮತದಾರರ ಓಲೈಕೆಯಲ್ಲಿ ಜಾಧವ ತೊಡಗಿಸಿಕೊಂಡಿದ್ದಾರೆ. ಜಾಧವ್ ತಮ್ಮ ಮುಂಬೈ ಭೇಟಿ ವಿಚಾರವಾಗಿ ನಗರದಲ್ಲಿಂದು ಮಾತನಾಡಿದ್ದು, ರಾಮರಾವ್ ಮಹಾರಾಜರ ಕರೆ ಮೇರೆಗೆ ಸೇವಾಲಾಲ್ ಚೌಕ್ ಉದ್ಘಾಟನೆಗೆ ಮುಂಬೈಗೆ ಹೋಗಿದ್ದೆ. ಇದೇ ಸಂದರ್ಭದಲ್ಲಿ ಗುಳೇ ಹೋಗಿರುವ ಕಲಬುರಗಿ ಕ್ಷೇತ್ರದ ಮತದಾರರನ್ನೂ ಭೇಟಿಯಾಗಿದ್ದೇನೆ ಎಂದರು.
ಸುಮಾರು ಒಂದು ಲಕ್ಷ ಮತದಾರರು ಮುಂಬೈಯಲ್ಲಿ ದುಡಿಮೆಗೆಂದು ಬಂದಿದ್ದಾರೆ. ಮತದಾನದ ದಿನದಂದು ಬಂದು ಮತ ಹಾಕುವಂತೆ ಮನವಿ ಮಾಡಕೊಂಡು ಬಂದಿದ್ದನೆ ಎಂದು ತಿಳಿಸಿದರು. ನಮ್ಮ ಸಮುದಾಯದ ಜೊತೆಗೆ ಇತರೆ ಸಮುದಾಯದ ಜನರೂ ದುಡಿಮೆಗೆಂದು ಹೋಗಿದ್ದಾರೆ. ಅವರ ಮತಗಳೂ ಅಮೂಲ್ಯವಾಗಿದ್ದು, ಅವರ ಬೆಂಬಲ ಕೋರಿ ಮನವಿ ಮಾಡಿದ್ದಾಗಿ ಜಾಧವ ಹೇಳಿಕೊಂಡರು.
ಇದೆವೇಳೆ ಸ್ಪೀಕರ್ ನೋಟೀಸ್ ನೀಡಿದ ವಿಚಾರವಾಗಿ ಮಾತನಾಡಿದ ಜಾಧವ, ಈಗಾಗಲೇ ಕಾನೂನೂ ತಜ್ಞರನ್ನು ಭೇಟಿಯಾಗಿದ್ದು, ರಾಜೀನಾಮೆ ಅಂಗೀಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಸ್ಪೀಕರ್ ಅವರಿಂದ ಎರಡು ನೋಟೀಸ್ ಬಂದಿವೆ. ಒಂದು ಅನರ್ಹತೆಗೆ ಸಂಬಂಧಿಸಿದ್ದು, ಮತ್ತೊಂದು ರಾಜೀನಾಮೆಗೆ ಸಂಬಂಧಿಸಿದ್ದು, ಸದ್ಯ ಒಂದು ಪತ್ರಕ್ಕೆ ವಕೀಲರ ಮೂಲಕ ಉತ್ತರ ನೀಡಿದ್ದೇನೆ. ರಾಜೀನಾಮೆ ಅಂಗೀಕಾರಕ್ಕೆ ಸಂಬಂಧಿಸಿದ ನೋಟೀಸ್ ಇನ್ನೂ ತಮ್ಮ ಕೈ ತಲುಪಿಲ್ಲ. ಸ್ಪೀಕರ್ ರಮೇಶ್ ಕುಮಾರ್ ಅವರ ಮೇಲೆ ನಂಬಿಕೆಯಿದೆ. ರಾಜೀನಾಮೆ ಅಂಗೀಕಾರವಾಗಲಿದೆ ಎಂಬ ವಿಶ್ವಾಸದೊಂದಿಗೆ ಲೋಕಸಭೆ ಚುನಾವಣೆ ಸಿದ್ಧತೆ ನಡೆಸಿದ್ದಾಗಿ ಉಮೇಶ್ ಜಾಧವ್ ತಿಳಿಸಿದರು.