ಕಲಬುರಗಿ: ಲಾಕ್ಡೌನ್ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆ ಗರ್ಭಿಣಿ, ಆಕೆಯ ಗಂಡ ಹಾಗೂ ಮಕ್ಕಳ ಮೇಲೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪುರ ತಾಲೂಕಿನ ಗೊಬ್ಬುರವಾಡಿ ನಿವಾಸಿಯಾದ ತುಂಬು ಗರ್ಭಿಣಿ, ಆಕೆಯ ಮಕ್ಕಳು, ಪತಿ ಹಾಗೂ ಪೋಷಕರು ಸೇರಿ ಒಟ್ಟು ಮಂದಿ ಜನರ ವಿರುದ್ಧ ಲಾಕ್ಡೌನ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ.
ಗರ್ಭಿಣಿಯು, ಆಕೆಯ ಪತಿ ಹಾಗೂ ಮಕ್ಕಳೊಂದಿಗೆ ದುಡಿಮೆಗಾಗಿ ಹೈದರಾಬಾದ್ಗೆ ಹೋಗಿದ್ದರು. ಹೆರಿಗೆಗಾಗಿ ತೆಲಂಗಾಣ ಪೊಲೀಸರಿಂದ ಪಾಸ್ ಪಡೆದು ವಾಪಸ್ ಬಂದಿದ್ದರು. ಟಂಟಂನಲ್ಲಿ ಗರ್ಭಿಣಿ ಸೇರಿ ಎಂಟು ಜನ ಊರಿಗೆ ವಾಪಸ್ ಆಗಿದ್ದರು. ಕಮಲಾಪುರ ಆರೋಗ್ಯ ಇಲಾಖೆ ಅಧಿಕಾರಿಗಳು ಇವರನ್ನು ಹೋಂ ಕ್ವಾರಂಟೈನ್ ಮಾಡಿದ್ದರು. ಆದರೆ, ಮರುದಿನ ಗರ್ಭಿಣಿಯ ಪತಿ ಮತ್ತು ತಾಯಿ ಸಮೀಪದ ಬೋಳೆವಾಡ ಗ್ರಾಮಕ್ಕೆ ತೆರಳಿದ್ದರು. ವಿಷಯ ತಿಳಿದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಗರ್ಭಿಣಿಯನ್ನೂ ಸೇರಿಸಿಕೊಂಡು ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಗರ್ಭಿಣಿಯ ಪತಿ, ತಾಯಿ ಮತ್ತಿತರರನ್ನು ಕಮಲಾಪುರದ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಹೆರಿಗೆ ದಿನಗಳು ಹತ್ತಿರವಿದ್ದಾಗ ಈ ರೀತಿ ಮಾಡಿರುವುದಕ್ಕೆ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.