ಕಲಬುರಗಿ : ಕೊರೊನಾ ಸೋಂಕಿತರು ಹಾಗೂ ಸಂಪರ್ಕಿತರನ್ನು ಕ್ವಾರಂಟೈನ್ ಮಾಡುವುದನ್ನು ಕೇಳಿದ್ದೇವೆ. ಇದೀಗ ಜಾನುವಾರುಗಳನ್ನೂ ಸಹ ಕ್ವಾರಂಟೈನ್ ಮಾಡಲಾಗುತ್ತಿದೆ.
ಹಾಗೆಂದು ಜಾನುವಾರುಗಳಿಗೆ ಕೊರೊನಾ ಬಂದಿದೆ ಅಂತಾ ಅನ್ಕೋಬೇಡಿ. ಜಾನುವಾರುಗಳಿಗೆ ಕೊರೊನಾ ತರಹದೇ ಮತ್ತೊಂದು ಸೋಂಕು ಆವರಿಸಿದೆ. ಲಂಪಿಸ್ಕಿನ್ ಅನ್ನೋ ವಿಚಿತ್ರ ರೋಗ ಜಾನುವಾರುಗಳಿಗೆ ಕಾಡುತ್ತಿದೆ. ಕೊರೊನಾ ಮನುಕುಲವನ್ನು ತತ್ತರಿಸಿದ್ರೆ, ಲಂಪಿಸ್ಕಿನ್ ಎಂಬ ಸೋಂಕು ಜಾನುವಾರುಗಳನ್ನು ತಬ್ಬಿಬ್ಬು ಮಾಡಿದೆ.
ಈ ಲಂಪಿಸ್ಕಿನ್ ದಿನದಿಂದ ದಿನಕ್ಕೆ ಜಾನುವಾರುಗಳಿಗೆ ಹಬ್ಬುತ್ತಲೇ ಇದೆ. ಕಲಬುರಗಿ ಜಿಲ್ಲೆಯಾದ್ಯಂತ ಆವರಿಸಿಕೊಂಡಿದ್ದು, ಜಾನುವಾರುಗಳ ಜೊತೆಗೆ ರೈತರು ಕಂಗಾಲಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಇದಕ್ಕೆ ಗಂಟು ರೋಗ ಅಂತಾ ರೈತರು ಕರೆಯುತ್ತಿದ್ದಾರೆ. ಇದೊಂದು ಅಂಟುರೋಗವಾಗಿದ್ದು, ಕಲಬುರಗಿ ಜಿಲ್ಲೆಯ 436 ಹಳ್ಳಿಗಳಿಗೆ ಹಬ್ಬಿದೆ.
ಲಂಪಿಸ್ಕಿನ್ ಅಂಟುರೋಗದ ಲಕ್ಷಣ : ಲಂಪಿಸ್ಕಿನ್ ಅಂಟುರೋಗದ ಪ್ರಮುಖ ಲಕ್ಷಣವೆಂದ್ರೆ ಜಾನುವಾರುಗಳ ಮೇಲೆ ಗಂಟುಗಳಾಗುತ್ತವೆ. ಅವು ಕೀವುಗಳಾಗಿ ಒಡೆಯುತ್ತವೆ. ರೋಗ ಬಂದ ಜಾನುವಾರುಗಳು ಮೇವನ್ನು ತಿನ್ನುವುದನ್ನು ಕಡಿಮೆ ಮಾಡುತ್ತವೆ. ರೋಗ ಬಂದ ಜಾನುವಾರುಗಳ ಜೊತೆ ಬೇರೆ ಜಾನುವಾರುಗಳು ಸೇರಿದ್ರೆ ಅದು, ಬೇರೆ ಜಾನುವಾರುಗಳಿಗೆ ಕೂಡ ಹಬ್ಬುತ್ತದೆ. ಹೀಗಾಗಿ, ಕೊರೊನಾ ಬಂದಾಗ ಮನುಷ್ಯರು ಹೇಗೆ ಪ್ರತ್ಯೇಕ ಐಸೋಲೇಷನ್ ಆಗ್ತಾರೋ, ಅದೇ ರೀತಿ ಲಂಪಿಸ್ಕಿನ್ ಬಂದ ಜಾನುವಾರುಗಳನ್ನು ಕೂಡ ಪ್ರತ್ಯೇಕ ಐಸೋಲೇಷನ್ ಮಾಡಬೇಕಾಗುತ್ತದೆ.
ಲಂಪಿಸ್ಕಿನ್ ರೋಗದಿಂದ ಜಾನುವಾರು ಜತೆ ರೈತ ಕಂಗಾಲು : ಹಾಲು ಮಾರಿಯೇ ಅನೇಕರು ಜೀವನ ನಡೆಸುತ್ತಿದ್ದಾರೆ. ಎತ್ತುಗಳು, ಕೃಷಿಯ ಮೂಲ ಆಧಾರ. ಇದೀಗ ಅವುಗಳಿಗೆ ಲಂಪಿಸ್ಕಿನ್ ರೋಗ ವಕ್ಕರಿಸಿಕೊಳ್ಳುತ್ತಿರುವುದು ರೈತರ ಆತಂಕ ಹೆಚ್ಚಿಸಿದೆ. ರೋಗ ಹೆಚ್ಚಾದ್ರೆ ಅನೇಕ ಜಾನುವಾರುಗಳು ಸಾಯುತ್ತವೇ ಹೀಗಾಗಿ ಹಸು, ಎಮ್ಮೆಗಳನ್ನೆ ನಂಬಿ ಬದುಕು ಸಾಗಿಸುತ್ತಿರುವ ರೈತರಿಗೆ ಆತಂಕ ಎದುರಾಗಿದೆ.
ಮೊದಲು ಆಂಧ್ರ ಹಾಗೂ ತೆಲಂಗಾಣದಲ್ಲಿ ಕಾಣಿಸಿಕೊಂಡ ಲಂಪಿಸ್ಕಿನ್ ರೋಗ ಇದೀಗ ಕರ್ನಾಟಕದ ಕಲಬುರಗಿ ಸೇರಿ ಹಲವು ಜಿಲ್ಲೆಯ ಜಾನುವಾರುಗಳಿಗೆ ವಕ್ಕರಿಸಿದೆ. ಸದ್ಯ ಜಿಲ್ಲೆಯಲ್ಲಿ 15 ಸಾವಿರಕ್ಕೂ ಅಧಿಕ ಜಾನುವಾರುಗಳಲ್ಲಿ ಕಾಣಿಸಿದ್ದು, ಸೋಂಕು ಇನ್ನಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.
ಈಗಗಾಲೇ ಪಶು ಸಂಗೋಪನಾ ಇಲಾಖೆ ಲಸಿಕೆ ಸೇರಿ ಅನೇಕ ಕ್ರಮಗಳನ್ನು ಕೈಗೊಂಡಿದೆ. ಆದರೂ ಸಹ ಜಾನುವಾರುಗಳಲ್ಲಿ ಸೋಂಕು ಕಡಿಮೆಯಾದ ಲಕ್ಷಣ ಅಷ್ಟೇನೂ ಕಂಡು ಬಂದಿಲ್ಲ. ಪಶು ಸಂಗೋಪನಾ ಇಲಾಖೆ ಲಸಿಕೆ ಜೊತೆಗೆ ಇನ್ನಷ್ಟು ಕ್ರಮಕ್ಕೆ ಮುಂದಾಗಿ ಸೋಂಕು ಹೆಚ್ಚಾಗದಂತೆ ತಡೆಯುವುದು ಅವಶ್ಯಕ.