ಕಲಬುರಗಿ: ಬಿಜೆಪಿ ಪಕ್ಷ ಉಪ ಚುನಾವಣೆಯಲ್ಲಿ ಧೃತಿಗೆಟ್ಟಿದೆ. ಸೋಲಿನ ಭೀತಿಯಿಂದ ಹಣ ಹಂಚಲು ಮುಂದಾಗಿದ್ದಾರೆ. ಕೂಡಲೇ ಚುನಾವಣಾ ಆಯೋಗ ಮಧ್ಯಪ್ರವೇಶಿಸಿ ಅಭ್ಯರ್ಥಿಯನ್ನು ಅನರ್ಹ ಮಾಡಬೇಕು ಹಾಗೂ ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಹಣ ಹಂಚಿಕೆ ವಿಡಿಯೋಗಿಂತ ದೊಡ್ಡ ಸಾಕ್ಷಿ ಬೇಕಾಗಿಲ್ಲ. ನಮ್ಮ ಕಾರ್ಯಕರ್ತರು ಈ ಬಗ್ಗೆ ದೂರು ನೀಡುತ್ತಾರೆ. ನನ್ನ ಮತವನ್ನೇ ಈ ಹಿಂದೆ ಅನರ್ಹ ಮಾಡಿದ್ದರು. ಎಸ್ಪಿ, ಡಿಸಿ ಬಿಜೆಪಿ ಏಜೆಂಟ್ಗಳಂತೆ ವರ್ತಿಸುತ್ತಿದ್ದಾರೆ. ಈ ಚುನಾವಣೆ ಮುಗಿದ ಮೇಲೆ ಏನಾಗುತ್ತೆ ಗೊತ್ತಿಲ್ಲ. ಆಗ ಈ ಎಲ್ಲಾ ಅಧಿಕಾರಿಗಳು ತೊಂದರೆಗೆ ಸಿಲುಕಿಕೊಳ್ತಾರೆ ಎಂದು ಹೇಳಿದ್ದಾರೆ.
ಯತ್ನಾಳ ಅವರನ್ನು ಈವರೆಗೂ ಯಾರು ಪ್ರಶ್ನೆ ಮಾಡಿಲ್ಲ. ಯತ್ನಾಳ ಸೇರಿದಂತೆ ಅನೇಕರು ಸ್ವಪಕ್ಷದಲ್ಲೇ ಸಿಎಂ ವಿರುದ್ಧ ಮಾತನಾಡುತ್ತಿದ್ದಾರೆ. ಅವರು ಹೇಳಿದ್ದು ತಪ್ಪು ಅಂತ ಯಾರು ಹೇಳಿಲ್ಲ. ರಾಜ್ಯ ಹಾಗೂ ರಾಷ್ಟ್ರ ನಾಯಕರಲ್ಲಿ ಯಾರೊಬ್ಬರು ಸಹ ಈ ಬಗ್ಗೆ ಮಾತನಾಡುತ್ತಿಲ್ಲ. ಹಾಗಾದ್ರೆ ಅವರ ಹೇಳಿಕೆಗಳು ಸರಿಯಿರಬೇಕು ಎಂದು ಯತ್ನಾಳ ಪರ ಬ್ಯಾಟ್ ಬೀಸಿದರು.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ ಕುತಂತ್ರ ವ್ಯಕ್ತಿಗಳ ಷಡ್ಯಂತ್ರ: ಈಶ್ವರಪ್ಪ
ನೈಟ್ ಕರ್ಫ್ಯೂನಿಂದ ಪ್ರಯೋಜನವಿಲ್ಲ. ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವ ವಿಚಾರಗಳಿಂದ ಯಾವುದೇ ಪ್ರಯೋಜನವಿಲ್ಲ. ಇದರಿಂದ ಜನರ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತದೆ ಹೊರತು ಮತ್ತೇನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.