ಕಲಬುರಗಿ: ಬಸ್ ನಿಲ್ದಾಣದ ಬಳಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ಐದು ಜನ ದರೋಡೆಕೋರರನ್ನು ಸೇಡಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ಅನುಮಾನಾಸ್ಪದ ರೀತಿಯಲ್ಲಿ ಸಿಕ್ಕಿಬಿದ್ದ ಐದು ಜನರನ್ನು ವಿಚಾರಣೆಗೆ ಒಳಪಡಿಸಿದಾಗ ದರೋಡೆಗೆ ಹೊಂಚು ಹಾಕಿದ್ದರು ಎಂಬ ಸತ್ಯ ಹೊರಬಿದ್ದಿದೆ. ಸಿಪಿಐ ಮಹ್ಮದ್ ಫಸಿಯೋದ್ದಿನ್, ಪಿಎಸ್ಐ ಸುನೀಲ ಮೂಲಿಮನಿ, ಉಪೇಂದ್ರ ನೇತೃತ್ವದಲ್ಲಿ ಪಿಸಿಗಳಾದ ವಿಠ್ಠಲರೆಡ್ಡಿ, ಮಲ್ಕಪ್ಪ, ಅಲ್ಲಾಭಕ್ಷ, ಶಿವಕುಮಾರ, ಮನೋಹರ ತಂಡ ದಾಳಿ ನಡೆಸಿದೆ.
ಅನೇಕ ದಿನಗಳಿಂದ ಪಟ್ಟಣದ ಕೆಲ ಬಡಾವಣೆಗಳಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ವಿಶೇಷ ಪೊಲೀಸ್ ತಂಡಗಳನ್ನ ರಚಿಸಲಾಗಿತ್ತು. ಬಂಧಿತರ ಮೇಲೆ ದರೋಡೆ, ಕಳ್ಳತನ ಮತ್ತು ಕೊಲೆ ಯತ್ನ ಆರೋಪಗಳಿವೆ. ಸೇಡಂ ನಿವಾಸಿ ಅಜ್ಜು ಅಲಿಯಾಸ್ ಮಹ್ಮದ ಅಗಸರ್, ಗಣೇಶ ಸಾತನೂರ, ಸುನೀಲ ಆಡಕಿ ಹಾಗೂ ಶಿವು ಮುತ್ತಗಿ, ಯಾದಗಿರಿ ಜಿಲ್ಲೆಯ ಕಟಗಿ ಶಹಾಪೂರ ನಿವಾಸಿ ಶಂಕರ ತಂದೆ ಈರಪ್ಪಾ ಎಂಬ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ ಕಟ್ಟಿಗೆ, ರಾಡ್ ಮತ್ತು ಖಾರದ ಪುಡಿ ವಶಪಡಿಸಿಕೊಳ್ಳಲಾಗಿದೆ ಎಂದು ಎಎಸ್ಪಿ ಅಕ್ಷಯ ಹಾಕೆ ತಿಳಿಸಿದ್ದಾರೆ.