ಕಲಬುರಗಿ: ಇಂಡಿಯಾ ಮೈತ್ರಿಕೂಟದಿಂದ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿರುವ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಖರ್ಗೆಯವರು ಪ್ರಧಾನಿ ಆಗುವ ಕಾಲ ಇದಲ್ಲ, ಮೊದಲೇ ಏನಾದರೂ ಪ್ರಯತ್ನಿಸಿದ್ದರೆ ಪ್ರಧಾನಿ ಆಗಬಹುದಿತ್ತು. ಈಗ ಏನಿದ್ದರೂ ಮೋದಿಯವರೇ ಮತ್ತೆ ಪ್ರಧಾನಿ ಆಗುತ್ತಾರೆ. ಖರ್ಗೆ ಮತ್ತದೇ ವಿರೋಧ ಪಕ್ಷದ ನಾಯಕರಾಗಿ ಉಳಿಯಬೇಕಾಗುತ್ತದೆ ಎಂದರು.
ಕಲಬುರಗಿಯಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಲಕೋಟೆ ಪದ್ಧತಿ ಇದ್ದಾಗಲೇ ಖರ್ಗೆ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಮಾಡಬಹುದಿತ್ತು. ಆದರೆ ಅವರಿಗೆ ಆ ಅರ್ಹತೆ ಇದ್ದರೂ ಕಾಂಗ್ರೆಸ್ ಸಿಎಂ ಮಾಡಲಿಲ್ಲ. ಈಗ ದಲಿತರ ಓಲೈಕೆಗಾಗಿ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿದೆ ಎಂದು ಟೀಕಿಸಿದರು.
ಬಿಜೆಪಿ ಗೆಲ್ಲಿಸಲು ಹಿಜಾಬ್ ನಿಷೇಧ: ಹಿಜಾಬ್ ನಿಷೇಧ ವಾಪಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಿದ್ದರಾಮಯ್ಯನವರಿಗೆ ಅರವು-ಮರುವು ಹಿಡಿದಿದೆ. ಅವರು ಹಿಜಾಬ್ ಹಾಕಿ ಎಂದು ಹೇಳಿದ್ದರೆ, ನಾವೂ ಸಹ ಕೇಸರಿ ಶಾಲು ಹಾಕಲು ಹೇಳಿದ್ದೇವೆ. ಯುಪಿಎ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಆಟ ನಡೆಯುವುದಿಲ್ಲ. ನೋಟು ಚೆಲ್ಲಿ ಸಿಎಂ ಆಗಲು ಎರಡನೇ ಎತ್ತು ತಯಾರಾಗಿ ಕುಳಿತಿದೆ ಎಂದು ಹೆಸರು ಪ್ರಸ್ತಾಪಿಸದೇ ಡಿ.ಕೆ.ಶಿವಕುಮಾರ ಸಿಎಂ ಆಗಲು ಕಾದುಕುಳಿತಿದ್ದಾರೆ ಎಂದು ಪರೋಕ್ಷವಾಗಿ ಹೇಳಿದರು.
ಇದೇ ವೇಳೆ, ನಾನೇನಿದ್ದರೂ ವಿಲನ್. ವಿಲನ್ ಇದ್ದರೆ ಮಾತ್ರ ಹೀರೋಗೆ ಕಿಮ್ಮತ್ತಿರುತ್ತದೆ. ವಿಲನ್ ಇಲ್ಲದಿದ್ದರೆ ಹೀರೋ ಯಾರ ಜೊತೆ ಫೈಟ್ ಮಾಡುತ್ತಾನೆ ಎಂದು ಪ್ರಶ್ನಿಸಿದ ಅವರು, ಸರ್ವಪಕ್ಷಗಳಿಗೂ ನಾನೇ ವಿರೋಧ ಪಕ್ಷದ ನಾಯಕ ಎಂದು ಮುಗುಳ್ನಕ್ಕರು. ಈ ಹಿಂದೆ ನಟ ಅಂಬರೀಷ್ ಸಹ ವಿಲನ್ ಆಗಿದ್ದರು. ನಂತರವಷ್ಟೇ ಅವರು ಹೀರೋ ಆದರು. ಅದೇ ರೀತಿ ನಾನು ಆಮೇಲೆ ಹೀರೋ ಆಗಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆ ಬಳಿಕ ಬದಲಾವಣೆ: ಬಿಜೆಪಿಯ ರಾಜ್ಯ ಪದಾಧಿಕಾರಿಗಳ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನ ಹೊರಹಾಕಿದ ಯತ್ನಾಳ್, ಬೆಣ್ಣೆ ಏನಿದ್ದರೂ ಯಡಿಯೂರಪ್ಪ ಪಾಲಿಗೆ ಹಾಗೂ ಮಜ್ಜಿಗೆ ಏನಿದ್ದರೂ ಉತ್ತರ ಕರ್ನಾಟಕಕ್ಕೆ ಎನ್ನುವಂತಹ ಪರಿಸ್ಥಿತಿ ಇದೆ. ರಾಜ್ಯಾಧ್ಯಕ್ಷ ಹುದ್ದೆ, ವಿರೋಧ ಪಕ್ಷದ ನಾಯಕ ಸ್ಥಾನ, ಪರಿಷತ್ ಸದಸ್ಯರ ಹುದ್ದೆಗಳೆಲ್ಲವೂ ಅವರಿಗೇ ಸಿಗುತ್ತವೆ ಎಂದರೆ ಹೇಗೆ ಎಂದು ಅಚ್ಚರಿ ವ್ಯಕ್ತಪಡಿಸಿ, ಲೋಕಸಭೆ ಚುನಾವಣೆ ಮುಗಿದ ಬಳಿಕ ಮಧ್ಯಪ್ರದೇಶ ರೀತಿಯಲ್ಲಿ ಎಲ್ಲವೂ ಬದಲಾಗುತ್ತದೆ ಎಂದರು.
ಇದನ್ನೂಓದಿ: ಯಾವುದೇ ಧರ್ಮವನ್ನು ಅತಿಯಾಗಿ ಓಲೈಸದೆ ಅನುದಾನವನ್ನು ಸಮಾನವಾಗಿ ಹಂಚಿ: ಯಡಿಯೂರಪ್ಪ