ಕಲಬುರಗಿ: ಬಲಗೈಯಿಂದ ಕೊಟ್ಟದ್ದು ಎಡಗೈಯಿಗೆ ತಿಳಿಯಬಾರದು ಎಂಬ ಮಾತಿದೆ. ಈ ಮಾತಿನಂತೆ ಎಷ್ಟೋ ಜನರು ಎಲೆ ಮರೆ ಕಾಯಿಯಂತೆ ಕೈಲಾಗದವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಈ ಮಾತಿಗೆ ಪೂರಕ ಎನ್ನುವಂತೆ ಕೆಎಎಸ್ ಅಧಿಕಾರಿಯೊಬ್ಬರು ಅಸಹಾಯಕರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೊರೊನಾ ಮಹಾಮಾರಿಯ ಹೊಡೆತಕ್ಕೆ ಇಡೀ ದೇಶವೇ ನಲುಗಿ ಹೋಗಿದೆ. ಈ ಕಷ್ಟದ ಪರಿಸ್ಥಿತಿಯಲ್ಲಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಸಾಧ್ಯವಾಗದಂತ ಎಷ್ಟೋ ನಿರ್ಗತಿಕರು ಇದ್ದಾರೆ. ಅಂತವರಿಗೆ ಅನ್ನ ನೀಡುವ ಮೂಲಕ ಸೇಡಂ, ಚಿತ್ತಾಪುರ ಹಾಗೂ ಚಿಂಚೋಳಿ ಉಪ ವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ರಮೇಶ ಕೋಲಾರ ಎಲ್ಲರ ಗಮನ ಸೆಳೆದಿದ್ದಾರೆ. ಪ್ರಚಾರದ ಹಂಗಿಲ್ಲದೆ ಸದಾಕಾಲ ಜನರ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಮೇಶ ಕೋಲಾರ, ಕೊರೊನಾ ತುರ್ತು ಸಂದರ್ಭದಲ್ಲಿ ಮನೆಯಲ್ಲೇ ಅಡುಗೆ ಮಾಡಿಸಿ ತಮ್ಮ ಸಿಬ್ಬಂದಿಗಳ ಮೂಲಕ ಬಡವರು, ಕೂಲಿ ಕಾರ್ಮಿಕರು, ನಿರ್ಗತಿಕರು ಹಾಗೂ ಭಿಕ್ಷುಕರಿಗೆ ಹಂಚುತ್ತಿದ್ದಾರೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮುಖ್ಯರಸ್ತೆ ಸರ್ಕಲ್, ಆಸ್ಪತ್ರೆ, ದಾನಮ್ಮ ದೇವಿ ದೇವಾಲಯ ಪ್ರದೇಶಗಳಿಗೆ ತಾವೇ ಖುದ್ದು ತೆರಳಿ ಬಡವರಿಗೆ ಊಟ, ನೀರು ತಲುಪಿಸುತ್ತಿದ್ದಾರೆ. ಇಂತಹ ಅಧಿಕಾರಿಗಳು ನಿಜಕ್ಕೂ ಎಲ್ಲರಿಗೂ ಸ್ಫೂರ್ತಿ ಎಂದರೆ ತಪ್ಪಿಲ್ಲ.