ಕಲಬುರಗಿ : ಮೈಸೂರು ರಾಜ್ಯ 'ಕರ್ನಾಟಕ' ರಾಜ್ಯವೆಂದು ನಾಮಕರಣಗೊಂಡು ಇದೇ ನವೆಂಬರ್ 1ಕ್ಕೆ 50 ವರ್ಷ ಪೂರ್ಣಗೊಳ್ಳುತ್ತಿದೆ. ರಾಜ್ಯಾದ್ಯಂತ ಸುವರ್ಣ ಸಂಭ್ರಮಾಚರಣೆಗೆ ಮುಂದಿನ 10 ದಿನದಲ್ಲಿ ಅಂತಿಮ ರೂಪುರೇಷೆ ಸಿದ್ದಪಡಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಇಂದು ಮಾತನಾಡಿದ ಅವರು, ನಮ್ಮದು ಜನಪದ ಸರ್ಕಾರ. ಹೀಗಾಗಿಯೇ ಕಲಾವಿದರಿಂದ, ಸಾಹಿತಿ, ಚಿಂತಕರು, ಲೇಖಕರಿಂದ ನೇರವಾಗಿ ಸಲಹೆ ಪಡೆದು ಸುವರ್ಣ ಸಂಭ್ರಮಾಚರಣೆಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಬೆಂಗಳೂರು, ಬೆಳಗಾವಿಯಲ್ಲಿ ಈಗಾಗಲೇ ಸಮಾಲೋಚನೆ ಸಭೆ ನಡೆಸಲಾಗಿದೆ. ಇಂದು ಇಲ್ಲಿ ಅಭಿಪ್ರಾಯ ಪಡೆಯಲಾಗಿದೆ. ಅಕ್ಟೋಬರ್ 4ರಂದು ಮೈಸೂರಿನಲ್ಲಿ ಸಭೆ ನಡೆಸಲಾಗುವುದು. ನಂತರ ಸ್ವೀಕೃತ ಸಲಹೆಗಳನ್ನು ರಾಜ್ಯದ ಪ್ರತಿ ಜಿಲ್ಲೆಯಿಂದ ಕಲಾವಿದರು, ಸಾಹಿತಿಗಳು, ಅಧಿಕಾರಿಗಳನ್ನು ಒಳಗೊಂಡ ಸಮಿತಿಯಲ್ಲಿ ಕ್ರೋಢೀಕರಿಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಸಂಭ್ರಮಾಚರಣೆಯ ಕಾರ್ಯಕ್ರಮಗಳಿಗೆ ಅಂತಿಮ ರೂಪ ನೀಡಲಾಗುವುದು ಎಂದರು.
ಇಂದಿನ ಸಮಾಲೋಚನಾ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರತಿಷ್ಠಾನ ಸ್ಥಾಪಿಸಬೇಕು, ರಾಜ್ಯೋತ್ಸವ ಪ್ರಶಸ್ತಿ ನೀಡುವಲ್ಲಿ ಈ ಭಾಗದವರಿಗೆ ನ್ಯಾಯ ಕಲ್ಪಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಮುಂದಿನ ದಿನದಲ್ಲಿ ಡಾ.ಸಿದ್ದಯ್ಯ ಪುರಾಣಿಕ ಸೇರಿದಂತೆ ಹಂತ ಹಂತವಾಗಿ ಪ್ರತಿಷ್ಠಾನ ಸ್ಥಾಪಿಸಲಾಗುವುದು. ಜಾನಪದ ಕಲೆ ಉಳಿಸಿ ಬೆಳೆಸಲು ಮತ್ತು ಯುವ ಪೀಳಿಗೆಗೆ ಪರಿಚಯಿಸಲು ಕೊಪ್ಪಳ ಜಿಲ್ಲೆಯಲ್ಲಿ 3.50 ಕೋಟಿ ರೂ. ಮೊತ್ತದಲ್ಲಿ ಜಾನಪದ ಲೋಕ ಸ್ಥಾಪನೆಗೆ ಆಯವ್ಯಯದಲ್ಲಿ ಘೋಷಿಸಿದ್ದು, ಇದೇ ವರ್ಷ ಸ್ಥಾಪಿಸಲಾಗುವುದು ಎಂದು ಸಚಿವ ತಂಗಡಗಿ ಮಾಹಿತಿ ನೀಡಿದರು.
ಸರೋಜಿನಿ ಮಹಿಷಿ ವರದಿಯಂತೆ ಖಾಸಗಿ ಶಾಲೆಯಲ್ಲಿ ಕನ್ನಡ ಕಲಿಕೆ ಕಡ್ಡಾಯ ಬೋಧನೆಗೆ ಒಂದು ವಾರದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುವುದು. ಇದಕ್ಕೆ ನೀತಿ, ನಿಯಮಗಳನ್ನು ಅಂತಿಮಗೊಳಿಸಲಾಗುವುದು. ನವೆಂಬರ್ 1ರಂದು ರಾಷ್ಟ್ರಧ್ವಜ ಜೊತೆಗೆ ನಾಡಧ್ವಜ ಹಾರಾಟಕ್ಕೆ ಅನುಮತಿ ನೀಡಲು ಕೇಂದ್ರಕ್ಕೆ ಪತ್ರ ಮತ್ತು ಧ್ವಜದ ಮಾದರಿ ಕಳುಹಿಸಲಾಗಿದೆ. ಅಲ್ಲಿಂದ ಅನುಮತಿ ಬಂದಲ್ಲಿ ನಾಡಧ್ವಜ ಹಾರಿಸಲಾಗುವುದು ಎಂದರು.
5-6 ಕಡೆ ಉತ್ಸವ ಆಯೋಜನೆ: 2018ರಲ್ಲಿ ನಿಮ್ಮ ಸರ್ಕಾರದ ಅವಧಿಯಲ್ಲಿ ರಾಷ್ಟ್ರಕೂಟ ಉತ್ಸವ ಆಯೋಜಿಸಲಾಗಿತ್ತು, ಬಳಿಕ ಸ್ಥಗಿತಗೊಂಡಿದೆ ಎಂದು ಪತ್ರಕರ್ತರೊಬ್ಬರು ಕೇಳಿದಾಗ, ನಮ್ಮ ಸರ್ಕಾರ ಈ ವರ್ಷ 5-6 ಕಡೆ ಉತ್ಸವ ಆಯೋಜಿಸುವ ಚಿಂತನೆ ನಡೆಸಿದೆ. ಇಲಾಖೆಗೆ 247 ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದು, ಅನುದಾನಕ್ಕೆ ಕೊರತೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ : ಮುಂದಿನ ಐದು ವರ್ಷ ನಿಖಿಲ್ ಕುಮಾರಸ್ವಾಮಿ ಚುನಾವಣೆಗೆ ಸ್ಪರ್ಧಿಸಲ್ಲ : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ