ಕಲಬುರಗಿ: ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ಡಿಸಿಎಂ ಗೋವಿಂದ ಕಾರಜೋಳ ಕೈಮುಗಿದು ನಿರಾಕರಿಸಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಕಾರಜೋಳ, ಮಹದಾಯಿ ಹೋರಾಟಕ್ಕೆ ತಾತ್ವಿಕ ಪರಿಹಾರ ಸಿಕ್ಕಿದೆ. ಮಹಾರಾಷ್ಟ್ರದಿಂದ ನಮಗೆ ಸಿಕ್ಕಿರುವ ಹನಿ ನೀರನ್ನೂ ಕೂಡ ವ್ಯರ್ಥ ಮಾಡದೆ ಸಮರ್ಪಕವಾಗಿ ಉಪಯೋಗಿಸುವ ಯೋಜನೆ ರೂಪಿಸುವುದಾಗಿ ಹೇಳಿದರು. ವಿಧಾನಸೌಧದಲ್ಲಿ ಕೂತವರು ಮಾರವಾಡಿಗಳ ಮಕ್ಕಳಲ್ಲ, ರೈತರ ಮಕ್ಕಳು. ಹೀಗಾಗಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹುಟ್ಟುಹಬ್ಬಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆತ್ಮೀಯವಾಗಿ ಶುಭ ಕೋರಿದ್ದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಕಾರಜೋಳ, ರಾಜಕೀಯದಲ್ಲಿ ವಿರೋಧ ಪಕ್ಷದವರಿಗೆ ವೈರಿಗಳಾಗಿ ಹೋರಾಡುತ್ತೇವೆ. ಆದರೆ ವೈಯಕ್ತಿಕ ಸಂಬಂಧಗಳು ಬೇರೆಯಾಗಿರುತ್ತವೆ. ರಾಜಕಾರಣ ಮಾಡುವವರು ಪ್ರೀತಿ-ವಿಶ್ವಾಸದಿಂದ ಇರಬೇಕು ಎಂದರು.
ಇದೇ ಸಂದರ್ಭದಲ್ಲಿ ಇತಿಹಾಸಕಾರ ಡಾ. ಶೆಟ್ಟರ್ ನಿಧನಕ್ಕೆ ಸಂತಾಪ ಸೂಚಿಸಿದರು. ಇದೇ ತಿಂಗಳು ಕಲಬುರಗಿಯಲ್ಲಿ ನಡೆದ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶೆಟ್ಟರ್ ಭಾಗಿಯಾಗಿದ್ದರು. ಅವರ ನಿಧನದಿಂದ ನಾಡಿನ ಸಂಶೋಧನೆಗೆ ಹಿನ್ನಡೆಯಾಗಿದೆ ಎಂದರು.