ಕಲಬುರಗಿ : ಗಡಿ ವಿಚಾರದಲ್ಲಿ ಉದ್ದೇಶ ಪೂರ್ವಕವಾಗಿ ಪದೇಪದೆ ಕ್ಯಾತೆ ತೆಗೆಯುತ್ತಿರುವುದನ್ನು ನೋಡಿಕೊಂಡು ಕೈಕಟ್ಟಿಕುಳಿತುಕೊಳ್ಳದೆ, ಅಂತವರಿಗೆ ಸರಿಯಾದ ರೀತಿ ಪಾಠ ಕಲಿಸಬೇಕೆಂದು ಖ್ಯಾತ ನಿದೇರ್ಶಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ ಹೇಳಿದ್ದಾರೆ.
ಕಲಬುರಗಿಗೆ ಆಗಮಿಸಿದ ವೇಳೆ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಉದ್ಧವ್ ಠಾಕ್ರೆ ಯಾವತ್ತೂ ಒಳ್ಳೆಯ ಮಾತುಗಳನ್ನು ಆಡಿಲ್ಲ. ಒಂದು ಉನ್ನತ ಸ್ಥಾನದಲ್ಲಿದ್ದುಕೊಂಡು ಈ ರೀತಿ ಉದ್ದಟತನದ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಶಿವಸೇನೆಯ ಮೂಲ ವ್ಯಕ್ತಿತ್ವವೇ ಬೇರೆ ಇದೆ.
ಗಡಿ ಹೇಳಿಕೆಯ ಹಿಂದೆ ದೊಡ್ಡ ಹುನ್ನಾರವಿದೆ. ವೈಯಕ್ತಿಕ ಲಾಭಕ್ಕಾಗಿ ಪಿತೂರಿ ನಡೆಸಲಾಗುತ್ತಿದೆ. ಇವರನ್ನು ಹೀಗೆ ಬಿಡೋದು ಸರಿಯಲ್ಲ. ಕನ್ನಡಿಗರು ವಿಶಾಲ ಹೃದಯಿಗಳು. ನಮ್ಮ ವಿಶಾಲತೆಯನ್ನು ದೌರ್ಬಲ್ಯ ಅಂತಾ ತಿಳಿದುಕೊಳ್ತಿದಾರೆ. ಇದಕ್ಕೆ ಒಂದು ಬಾರಿ ಸರಿಯಾದ ಪೆಟ್ಟು ಕೊಡಬೇಕು, ಗಡಿ ಕ್ಯಾತೆಗೆ ಇತಿಶ್ರೀ ಹಾಡಲೇ ಬೇಕು ಎಂದರು.
ಓದಿ:ಉದ್ಧವ್ ಠಾಕ್ರೆ ಹೇಳಿಕೆಯನ್ನು ಬಿಜೆಪಿ ತಿರಸ್ಕರಿಸಿದೆ: ಕ್ಯಾ.ಗಣೇಶ್ ಕಾರ್ಣಿಕ್
ಮಾಹಾರಾಷ್ಟ್ರದ ಹಲವು ನಗರಗಳು ಕರ್ನಾಟಕಕ್ಕೆ ಸೇರುತ್ತವೆ. ಇತಿಹಾಸವನ್ನು ನೋಡಿದ್ರೆ ಮಹಾರಾಷ್ಟ್ರದ ಮುಂಬೈ ಸೇರಿದಂತೆ ಸೊಲ್ಲಾಪುರ, ಅಕ್ಕಲಕೋಟ್, ಕಾಸರಗೋಡ್ ಹೀಗೆ ಹಲವು ಪ್ರದೇಶಗಳು ಕರ್ನಾಟಕ್ಕೆ ಸೇರಿದವು. ಅಲ್ಲಿನ ಶಾಸನಗಳು ಕರ್ನಾಟಕದ ಇತಿಹಾಸವನ್ನು ಸಾರುತ್ತವೆ. ಇದನ್ನೆಲ್ಲ ಕೆದಕಿದರೆ ಇವೆಲ್ಲ ಕರ್ನಾಟಕಕ್ಕೆ ಸೇರಬೇಕು ಎಂದು ನಾಗಾಭರಣ ಹೇಳಿದ್ರು.