ಸೇಡಂ : ಖಾಸಗಿ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು. ಸಮಸ್ಯೆ ಪರಿಹಾರಕ್ಕೆ ಸರ್ಕಾರ ಎಲ್ಲಿಯವರೆಗೆ ಮುಂದಾಗುವುದಿಲ್ಲವೋ ಅಲ್ಲಿಯವರೆಗೆ ಕಲ್ಯಾಣ ಕರ್ನಾಟಕ ಭಾಗದ ಖಾಸಗಿ ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಕಲ್ಯಾಣ ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಜಿಲ್ಲಾಧ್ಯಕ್ಷ ಸುನೀಲ್ ಹುಡಗಿ ತಿಳಿಸಿದ್ದಾರೆ.
ಪಟ್ಟಣದ ವಿಶ್ವಗಂಗಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಕಲ್ಯಾಣ ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪನಾ ಸದಸ್ಯರಾಗಿದ್ದ ಶಂಕರ ಬಿರಾದಾರ ಅವರು, ಸಾಲಗಾರರ ಕಿರುಕುಳ ಮತ್ತು ಗೂಂಡಾಗಿರಿಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ಹಿನ್ನೆಲೆ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶಂಕರ ಬಿರಾದಾರ ಸರಳ ಮತ್ತು ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರಾಗಿದ್ದರು. 21 ವರ್ಷಗಳ ಕಾಲ ದುಡಿದು ಶಿಕ್ಷಣ ಸಂಸ್ಥೆಯನ್ನು ಕಟ್ಟಿದವರು, ಸಾಲಗಾರರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು. ಆಗಸ್ಟ್ ತಿಂಗಳವರೆಗೆ ಯಾವುದೇ ಸರ್ಕಾರಿ, ಖಾಸಗಿ ಬ್ಯಾಂಕ್ಗಳು, ವಾಹನ ಸಾಲಗಾರರು, ಲೇವಾದೇವಿಯವರು ಶಿಕ್ಷಣ ಸಂಸ್ಥೆಗಳಿಗೆ ತೊಂದರೆ ಕೊಡಬಾರದ ರೀತಿಯಲ್ಲಿ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ರೈತರ ಆತ್ಮಹತ್ಯೆಯ ರೀತಿ, ಶಿಕ್ಷಣ ಸಂಸ್ಥೆಗಳು ಸರಣಿ ಆತ್ಮಹತ್ಯೆ ಎದುರಿಸಬೇಕಾದೀತು ಎಂದು ಆತಂಕ ವ್ಯಕ್ತಪಡಿಸಿದರು.
ಓದಿ : ಕೌಲಗುಡ್ಡ ಗ್ರಾಮದ ಕರಿಯೋಗಸಿದ್ದೇಶ್ವರ ಕನ್ನಡ ಮಾಧ್ಯಮ ಶಾಲೆ ಉದ್ಘಾಟನೆ
ಸಮಾಜ ಸೇವೆಯ ಪ್ರತಿಷ್ಠೆಗೆ ಬಿದ್ದು, ಸಾಲ ಮಾಡಿ ಶಾಲೆ ನಡೆಸುತ್ತಿದ್ದೇವೆ. ಮದ್ಯ ಮಾರುವ ಬಾರ್ ಮಾಲೀಕರು ಐಶಾರಾಮಿ ಕಾರುಗಳಲ್ಲಿ ಓಡಾಡ್ತಿದ್ದಾರೆ. ಶಿಕ್ಷಣ ನೀಡುವ ಸಂಸ್ಥೆಗಳು ಬೀದಿಗೆ ಬಂದಿವೆ. ಕೋವಿಡ್ನಿಂದ ಪಾಲಕರು ಸಂಕಷ್ಟದಲ್ಲಿದ್ದು, ಶಿಕ್ಷಣ ಸಂಸ್ಥೆಗಳು ಕಂಗಾಲಾಗಿವೆ. ಖಾಸಗಿ ಲೇವಾದೇವಿದಾರರು ಗೂಂಡಾಗಳ ಮೂಲಕ ಸಾಲ ವಸೂಲಾತಿಗೆ ಮುಂದಾಗಿದ್ದಾರೆ. ಇದರಿಂದ ಇಡೀ ಕುಟುಂಬಕ್ಕೆ ಮತ್ತು ಶಿಕ್ಷಣ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತಿದೆ ಎಂದು ನೋವು ವ್ಯಕ್ತಪಡಿಸಿದರು.