ಕಲಬುರಗಿ: ಜವಾರಿ ಊಟ ತಿಂದು ಕಟ್ಟುಮಸ್ತಾಗಿ 100 ಕಿಲೋ ಧಾನ್ಯದ ಚೀಲಗಳನ್ನು ಸರಾಗವಾಗಿ ಹೊತ್ತು ಎಸೆಯುವ ತಾಕತ್ತು ನಮ್ಮ ಹಿರಿಯರಿಗೆ ಇತ್ತು. ಆದರೆ ಇಂದಿನ ಹೈಬ್ರೀಡ್ ಆಹಾರ ಪದ್ಧತಿಯಿಂದ 25 ಕೆಜಿ ಭಾರ ಎತ್ತಬೇಕಾದರೂ ಸುಸ್ತು ಎನ್ನುವವರೇ ಹೆಚ್ಚು. ಆದರೆ ಇಲ್ಲೊಬ್ಬ 22 ವರ್ಷದ ಯುವಕನ ತಾಕತ್ತು ನೋಡಿದ್ರೆ ಎಂತವರು ವಾವ್ ಅನ್ನಲೇಬೇಕು. 120 ಕೆಜಿ ಭಾರದ ಜೋಳದ ಚೀಲವನ್ನು ಹೊತ್ತು ಸರಾಗವಾಗಿ ನಾಲ್ಕೂವರೆ ಕಿಲೋ ಮೀಟರ್ ನಡೆಯುವ ಶಕ್ತಿಶಾಲಿ ಇವರಾಗಿದ್ದಾರೆ.
ಗ್ರಾಮೀಣ ಭಾಗದ ಯುವಕರಲ್ಲಿ ಪ್ರತಿಭೆ ಹೆಚ್ಚು ಅನ್ನೋದು ಎಲ್ಲರಿಗೂ ತಿಳಿದ ವಿಷಯ. ಯಾವುದೇ ಪ್ರೋತ್ಸಾಹ, ತರಬೇತಿ ಇಲ್ಲದೆಯೇ ಗ್ರಾಮೀಣ ಭಾಗದ ಯುವಕರು ಸಾಹಸ, ಕ್ರೀಡೆಯಲ್ಲಿಯೂ ಹೆಸರು ಗಳಿಸಿದವರಿದ್ದಾರೆ. ಇಂತವರ ಸಾಲಿಗೆ ಅಫ್ಜಲಪುರ ತಾಲೂಕಿನ 22 ವರ್ಷ ವಯಸ್ಸಿನ ಸಚಿನ್ ಜಮಾದಾರ್ ಸೇರಿದ್ದಾರೆ. 120 ಕೆಜಿ ಭಾರದ ಜೋಳದ ಚೀಲವನ್ನು ತನ್ನ ಭುಜದ ಮೇಲೆ ಹೊತ್ತು ನಾಲ್ಕೂವರೆ ಕಿ.ಮೀ.ವರೆಗೆ ಕ್ರಮಿಸಿ ಶಹಬ್ಬಾಷ್ಗಿರಿ ಪಡೆದಿದ್ದಾರೆ. ಚೀಲ ಹೊತ್ತು ತೆಗ್ಗಳ್ಳಿ ಗ್ರಾಮದಿಂದ ನಾಲ್ಕೂವರೆ ಕಿಲೋ ಮೀಟರ್ ದೂರದವರೆಗೆ ಸರಾಹವಾಗಿ ಸಾಗಿದ್ದಾರೆ. ಅಷ್ಟೇ ಅಲ್ಲದೆ ಮಾರ್ಗದಲ್ಲಿ ಬರುವ ಒಂದು ಹಳ್ಳ ಇಳಿದು ಹಳ್ಳದ ದಿಬ್ಬ ಹತ್ತಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾರೆ.
ತೆಗ್ಗಳ್ಳಿ ಗ್ರಾಮದ ನೂರಂದಪ್ಪ ಹಾಗೂ ವಿಮಲಾಬಾಯಿ ದಂಪತಿಯ ಐದು ಮಕ್ಕಳಲ್ಲಿ ಮೂರನೇ ಪುತ್ರನಾದ ಸಚಿನ್ ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಓದುವುದರಲ್ಲಿ ಆಸಕ್ತಿ ಹೊಂದಿರದ ಇವರು, ಒಕ್ಕಲುತನ ಕೆಲಸ ಮಾಡುತ್ತಿದ್ದಾರೆ. ಒಕ್ಕಲುತನದ ಜೊತೆಗೆ ಸಚಿನ್ ಒಳ್ಳೆಯ ಈಜುಪಟುವಾಗಿದ್ದು, ತುಂಬಿ ಹರಿಯುವ ಅಮರ್ಜಾ, ಭೀಮಾ ನದಿಯಲ್ಲಿ ಈಜಿ ಸೈ ಎನಿಸಿಕೊಂಡಿದ್ದಾರೆ.
ಸುಗ್ಗಿಯ ವೇಳೆ ತುಂಬಿದ ಚೀಲಗಳನ್ನು ಹೊತ್ತು ತರುವುದು, ಟ್ರ್ಯಾಕ್ಟರ್ಗಳಿಂದ ಇಳಿಸುವ ಮೂಲಕ ಗ್ರಾಮಸ್ಥರಿಗೆ ಸಹಾಯ ಕೂಡ ಮಾಡುತ್ತಾರೆ. ಸಚಿನ್ ಜಮಾದಾರ್ ಸಾಹಸ ಕೊಂಡಾಡಿರುವ ಗ್ರಾಮಸ್ಥರು, ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಅವರಿಗೆ ನಾಲ್ಕು ತೊಲೆಯ ಎರಡು ಬೆಳ್ಳಿ ಕಡಗ ತೊಡಿಸಿ ಸನ್ಮಾನಿಸಿ, ಗ್ರಾಮದ ತುಂಬಾ ಮೆರವಣಿಗೆ ಮಾಡಿ ಸಂಭ್ರಮಿಸಿದ್ದಾರೆ.
ಸಚಿನ್ ಅವರ ಸೋದರ ಮಾವ ಕೂಡ ತಮ್ಮ ಬೆನ್ನಿನ ಮೇಲೆ 110 ಕೆಜಿ ಭಾರದ ಚೀಲ, ಅದರ ಮೇಲೆ ಓರ್ವ 65 ಕೆಜಿ ಭಾರದ ವ್ಯಕ್ತಿಯನ್ನು ಕೂರಿಸಿಕೊಂಡು ನೆಲದಿಂದ ಮೇಲಕ್ಕೆ ಎತ್ತಿ ಸಾಹಸ ತೋರಿದ್ದಾರೆ. ಶಕ್ತಿಶಾಲಿಯಾದ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಕ್ಕರೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವುದು ಖಚಿತ.