ಕಲಬುರಗಿ: ವಿಶ್ವ ಕೌಶಲ್ಯ ದಿನಾಚರಣೆ ಹಿನ್ನೆಲೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಕಳೆದ ಜುಲೈ ತಿಂಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಅಯೋಜಿಸಿದ್ದ ಕೌಶಲ್ಯ ಸ್ಫೂರ್ತಿ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕು.ರಕ್ಷಿತಾ ಅವರಿಗೆ ಡಿ.ಸಿ ಯಶವಂತ ಗುರುಕರ್ ಅವರ ಒಂದು ದಿನದ ಕೆಲಸ ಕಾರ್ಯಗಳ ವೀಕ್ಷಣೆಗೆ ಅಪೂರ್ವ ಅವಕಾಶ ಸಿಕ್ಕಿತ್ತು.
ಜಿಲ್ಲಾಧಿಕಾರಿಗಳ ಇಡೀ ದಿನದ ಕಾರ್ಯವೈಖರಿ ವೀಕ್ಷಿಸಲು ಬೆಳಗ್ಗೆ ಡಿ.ಸಿ ಕಚೇರಿಗೆ ಬಂದ ಜೇವರ್ಗಿ ಮೂಲದ ಕಲಬುರಗಿ ವಿ.ಜಿ.ಮಹಿಳಾ ಮಹಾವಿದ್ಯಾಲಯದ ಬಿ.ಎಸ್.ಸಿ ಎರಡನೇ ಸೆಮಿಸ್ಟರ್ ವಿದ್ಯಾರ್ಥಿನಿ ರಕ್ಷಿತಾ ಅವರನ್ನು ಹೂಗುಚ್ಛ ನೀಡಿ ಡಿ ಸಿ ಯಶವಂತ ಗುರುಕರ್ ಬರಮಾಡಿಕೊಂಡರು.
ಇದನ್ನೂ ಓದಿ: ಅತ್ತೆಯ ಕಿರುಕುಳವೇ ಸ್ಫೂರ್ತಿ; UPSC ಪಾಸ್ ಮಾಡಿದ 7 ವರ್ಷದ ಮಗುವಿನ ತಾಯಿ
ನಿನ್ನೆ ಇಡೀ ದಿನ ಜಿಲ್ಲಾಧಿಕಾರಿಗಳೊಂದಿಗೆ ಇದ್ದು ಹೊಸ ಅನುಭವ ಪಡೆದ ವಿದ್ಯಾರ್ಥಿನಿ ಹರ್ಷ ವ್ಯಕ್ತಪಡಿಸಿದಳು. 'ಡಿಸಿ ಅವರ ದೈನಂದಿನ ಕೆಲಸ ಕಾರ್ಯಗಳನ್ನ ತುಂಬಾ ಹತ್ತಿರದಿಂದ ನೋಡಿದ್ದೇನೆ. ಸಭೆಯಲ್ಲಿಯೂ ಭಾಗವಹಿಸಿದ್ದೇನೆ. ಬಿಡುವಿಲ್ಲದ ಕೆಲಸದ ನಡುವೆಯೂ ಕಚೇರಿಗೆ ಬರುವ ಸಾರ್ವಜನಿಕರನ್ನು ಸೌಜನ್ಯಯುತವಾಗಿ ಕಾಣುವ ಮತ್ತು ದೂರವಾಣಿ ಕರೆಗೆ ಪ್ರತಿಕ್ರಿಯಿಸುವ ರೀತಿ, ಯಾರಿಗೂ ಭೇದಭಾವ ಮಾಡದೇ ಎಲ್ಲರನ್ನೂ ಸಮಾನವಾಗಿ ಕಾಣುವ ಸರಳ ವ್ಯಕ್ತಿತ್ವ ಅವರದ್ದಾಗಿದೆ. ನಾನು ನನ್ನ ಜೀವನದಲ್ಲಿ ಇವರನ್ನು ಆದರ್ಶವಾಗಿಟ್ಟುಕೊಂಡು ಮುಂದೆ ಸಾಗಲು ಪ್ರಯತ್ನಿಸುವೆ' ಎಂದು ಕುಮಾರಿ ರಕ್ಷಿತಾ ಹೇಳಿದರು.
ಇದನ್ನೂ ಓದಿ: ಒಂದು ದಿನ ಪಿಡಿಒ ಆಗಿ ಸೇವೆ ಸಲ್ಲಿಸಿದ 14 ವರ್ಷದ ಬಾಲಕಿ
ಇದೇ ವೇಳೆ ಡಿಸಿ ಯಶವಂತ ಮಾತನಾಡಿ, ಕೌಶಲ್ಯಾಭಿವೃದ್ಧಿ ಇಲಾಖೆಗೆ ಧನ್ಯವಾದ ತಿಳಿಸಿದರು. ಕು.ರಕ್ಷಿತಾ ಒಂದು ದಿನ ನಮ್ಮ ಕಚೇರಿಯಲ್ಲಿದ್ದು, ಕಚೇರಿ ಪರಿಸರದ ಅನುಭವ ಪಡೆದುಕೊಂಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರು. ವಿದ್ಯಾರ್ಥಿನಿ ನಿನ್ನೆ ಬೆಳಗ್ಗೆ 10.30 ಕ್ಕೆ ಕಚೇರಿಗೆ ಹಾಜರಾಗಿ ಸಾಯಂಕಾಲ 5.30 ರ ವರೆಗೂ ಡಿಸಿ ಅವರ ಜೊತೆಗಿದ್ದು, ಜಿಲ್ಲಾಧಿಕಾರಿಗಳ ಕಾರ್ಯ ವೈಖರಿ ಗಮನಿಸಿದರು. ನಂತರ ವಿದ್ಯಾರ್ಥಿನಿಯನ್ನು ಸರ್ಕಾರಿ ವಾಹನದಲ್ಲಿಯೇ ಮನೆಗೆ ತಲುಪಿಸಲಾಯಿತು.
ಇದನ್ನೂ ಓದಿ: ಮಹಿಳೆಯರ ಮೇಲಿನ ದೌರ್ಜನ್ಯ ಜಾಗೃತಿಗೆ ‘ಮಹಿಳಾ ಸುರಕ್ಷತೆಗಾಗಿ ಒಂದು ದಿನ’ ಆಯೋಜಿಸಿದ ಪೊಲೀಸರು