ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ ಸುಪ್ರಸಿದ್ಧ ಶ್ರೀ ಶರಣಬಸವೇಶ್ವರರ 199ನೇ ಮಹೋತ್ಸವಕ್ಕೂ ಕೊರೊನಾ ಕಂಟಕ ಎದುರಾಗಿದೆ. ವಿಜೃಂಭಣೆಯಿಂದ ಆಚರಿಸಬೇಕಿದ್ದ ಜಾತ್ರೆಯನ್ನ ಈ ಬಾರಿ ಸರಳ, ಸಾಂಪ್ರದಾಯಿಕವಾಗಿ ತೇರು ಎಳೆದು ಮುಕ್ತಾಯಗೊಳಿಸಲಾಗಿದೆ. ಇದು ಸಹಸ್ರಾರು ಭಕ್ತರಿಗೆ ನಿರಾಶೆ ಉಂಟು ಮಾಡಿದೆ.
ಕೊರೊನಾ 2ನೇ ಅಲೆ ಹಾವಳಿ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಜಿಲ್ಲಾಡಳಿತ ಜಾತ್ರೆ, ಉರುಸ್ ಆಚರಣೆಗೆಗಳಿಗೆ ಬ್ರೇಕ್ ಹಾಕಿದೆ. ಹೀಗಾಗಿ, ಒಂದು ತಿಂಗಳ ಕಾಲ ವೈಭವದಿಂದ ನಡೆಯುತ್ತಿದ್ದ ಶರಣ ಬಸವೇಶ್ವರರ ಜಾತ್ರಾ ಮಹೋತ್ಸವ ಈ ಬಾರಿ ಸಾಂಪ್ರದಾಯಿಕವಾಗಿ, ಸರಳವಾಗಿ ಆಚರಿಸಲಾಯಿತು.
ಶರಣಬಸವೇಶ್ವರ ಸಂಸ್ಥಾನದ ಪೀಠಾಧೀಪತಿ ಶರಣಬಸವಪ್ಪ ಅಪ್ಪಾ ಅವರು ಪರುಷ ಬಟ್ಟಲು ಪ್ರದರ್ಶಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಿದರು. ಜಾತ್ರೆ ಹಿನ್ನೆಲೆ ದೇವಸ್ಥಾನದ ಆವರಣದಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ರಾಜ್ಯ ಅಷ್ಟೇ ಅಲ್ಲ, ಹೊರ ರಾಜ್ಯಗಳಲ್ಲೂ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಅಸಂಖ್ಯಾತ ಭಕ್ತರಿದ್ದಾರೆ. ಜಾತ್ರೆಗೆ ಭಕ್ತರ ದಂಡು ಹರಿದು ಬರಬಹುದು ಅನ್ನೋ ಕಾರಣಕ್ಕಾಗಿ ದೇವಸ್ಥಾನದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ದೇವಸ್ಥಾನದ ಮುಂಭಾಗದ ಎರಡು ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ಅಲ್ಲದೆ, ಜಾತ್ರಾ ಅಂಗಡಿಗಳಿಗೂ ನಿಷೇಧ ಹೇರಲಾಗಿದೆ. ಪ್ರತಿ ವರ್ಷ ಮಹಾ ರಥೋತ್ಸವ ಸಂಜೆ 5 ಗಂಟೆ ನಂತರ ಜರುಗುತ್ತಿತ್ತು. ಆದ್ರೆ, ಕೊರೊನಾ ಕಾಟ ಹಿನ್ನೆಲೆ 199ನೇ ಶರಣಬಸವೇಶ್ವರರ ಜಾತ್ರಾ ಮಹೋತ್ಸವ ಅಂಗವಾಗಿ ಈ ಬಾರಿ 1:30ಗಂಟೆಗೆ ಮಹಾರಥೋತ್ಸವ ಜರುಗಿತು.