ಕಲಬುರಗಿ: ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಅಪ್ರಾಪ್ತ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಶೇಷ ತಂಡ ರಚಿಸಿ ಕೃತ್ಯ ನಡೆದ 24 ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಕನ್ನಡ ರಾಜ್ಯೋತ್ಸವ ದಿನದಂದು ಮಧ್ಯಾಹ್ನ 3-4 ಗಂಟೆ ವೇಳೆ ಮನೆಯಿಂದ ಬಹಿರ್ದೆಸೆಗೆ ಹೋದ ಬಾಲಕಿಯನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರವೆಸಗಿ ಬಳಿಕ ಬಾಲಕಿ ಧರಿಸಿದ್ದ ದುಪ್ಪಟ್ಟದಿಂದ ಉಸಿರುಗಟ್ಟಿಸಿ ಕೊಲೆಗೈದು ಆರೋಪಿ ಪರಾರಿಯಾಗಿದ್ದ. ನಂತರ ಆಳಂದ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚನೆ ಮಾಡಿ ಪೊಲೀಸರು ಆರೋಪಿಯನ್ನು ಬಂಧಿದ್ದಾರೆ. ಆದರೆ ವಿಚಾರಣೆ ವೇಳೆ ಆರೋಪಿ ಹೇಳಿದ ಮಾತಿಗೆ ಪೊಲೀಸರು ದಂಗಾಗಿದ್ದಾರೆ.
ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ನೋಡುವ ಗೀಳು: ಲೈಂಗಿಕ ಅಪರಾಧ ಎಸಗಿರುವ ಆರೋಪಿಯ ವಿಚಾರಣೆ ವೇಳೆ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಕೃತ್ಯ ಎಸಗಿರುವ ಆರೋಪಿ ಕೂಡ ಅಪ್ರಾಪ್ತ. ಐಟಿಐ ಓದುತ್ತಿರುವ ಆರೋಪಿ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನ ನೋಡುತ್ತಿದ್ದನಂತೆ. ಅದರಿಂದ ಪ್ರಚೋದನೆಗೋಳಗಾಗಿ ಅಂದು ಬಾಲಕಿ ಬಹಿರ್ದೆಸೆಗೆ ಹೋದಾಗ ಕೃತ್ಯ ಎಸಗಿದ್ದಾನೆ. ಕೃತ್ಯದ ಬಗ್ಗೆ ಬಾಲಕಿ ತನ್ನ ಕುಟುಂಬಸ್ಥರಿಗೆ ಹೇಳುತ್ತಾಳೆ ಎಂದು ಹತ್ಯೆಗೈದಿದ್ದಾನೆ. ನಂತರ ಕಬ್ಬಿನ ಗದ್ದೆ ಮೂಲಕ ಕಾಲುವೆಗೆ ಹೋಗಿ ಕೈ-ಕಾಲು ತೊಳೆದುಕೊಂಡು ವಾಪಸ್ ಊರಿಗೆ ಹೋಗಿ ತನಗೇನು ಗೊತ್ತೆ ಇಲ್ಲ ಎಂಬಂತೆ ನಟಿಸಿದ್ದಾನೆ.
ತನಿಖೆಯಲ್ಲಿ ತೊಡಗಿದ ಪೊಲೀಸರ ವಿಶೇಷ ತಂಡ, ಸಂಶಯದ ಮೇರೆಗೆ ಗ್ರಾಮದ ನಾಲ್ಕಾರು ಹುಡುಗರನ್ನ ವಿಚಾರಣೆಗೆ ಒಳಪಡಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಆರೋಪಿ, ಮೊಬೈಲ್‌ನಲ್ಲಿ ಅಶ್ಲೀಲ್ ವಿಡಿಯೋಗಳನ್ನು ನೋಡಿ ಪ್ರಚೋದನೆಗೊಂಡು ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪೊಲೀಸ್ ತಂಡಕ್ಕೆ 1 ಲಕ್ಷ ಬಹುಮಾನ: ಇನ್ನು 10 ದಿನದೊಳಗಾಗಿ ಚಾರ್ಚ್ ಶೀಟ್ ಸಲ್ಲಿಸಿ ಆರೋಪಿಗೆ ಕಠಿಣ ಶಿಕ್ಷೆಗೆ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಈಶಾ ಪಂತ್ ಹೇಳಿದ್ದಾರೆ. ಅಲ್ಲದೆ 24 ಗಂಟೆಯಲ್ಲಿ ಪ್ರಕರಣ ಭೇದಿಸಿದ ಪೊಲೀಸ್ ತಂಡಕ್ಕೆ 1 ಲಕ್ಷ ಬಹುಮಾನ ಘೋಷಿಸಿದ್ದಾರೆ. ಅನಾವಶ್ಯಕವಾಗಿ ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ. ಕೊಟ್ಟರು ಮೊಬೈಲ್‌ನಲ್ಲಿ ಅವರು ನಡೆಸುವ ಚಲನವಲನಗಳ ಮೇಲೆ ಗಮನ ಇರಲಿ ಎಂದು ಎಸ್ಪಿ ಇಶಾ ಪಂತ್ ಕಿವಿ ಮಾತು ಹೇಳಿದ್ದಾರೆ.
ಕಡು ಬಡತನ ಹಿನ್ನೆಲೆ ಶಿಕ್ಷಣಕ್ಕಾಗಿ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದ ಅಪ್ರಾಪ್ತ ಬಾಲಕಿ ಬಲಿಯಾಗಿರುವುದು ದುರಂತವೇ ಸರಿ.
ಇದನ್ನೂ ಓದಿ: ಕಲಬುರಗಿಯಲ್ಲಿ ಅಪ್ರಾಪ್ತ ಬಾಲಕಿ ಅತ್ಯಾಚಾರ-ಕೊಲೆ ಪ್ರಕರಣ: ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚನೆ